*ನಟ, ಗಾಯಕನಿಗೆ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ: ಪ್ರಸಿದ್ಧ ಹರಿಯಾಣವಿ ಗಾಯಕ ಮತ್ತು ನಟ ಅಂಕಿತ ಬಲಿಯಾನ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶ ಶಾಯ್ತಿಯಲ್ಲಿ ನಡೆದಿದೆ
ಏಕಾಏಕಿ ಬಂದ ಅಪರಿಚಿತ ದುಷ್ಕರ್ಮಿಗಳ ತಂಡ ಅಂಕಿತ್ ಅವರ ಮೇಲೆ ಸತತ 10 ರಿಂದ 15 ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ.
ಅಂಕಿತ್ ಬಲಿಯಾನ್ ಕಳೆದ ಒಂದು ವರ್ಷದಿಂದ ಪ್ರತಿದಿನ ಈ ಜಿಮ್ಗೆ ಆಗಮಿಸುತ್ತಿದ್ದರು. ಬುಧವಾರ ಸಂಜೆ 4 ಗಂಟೆಗೆ ಜಿಮ್ ಗೆ ಬಂದಿದ್ದ ಅವರು, ಕಸರತ್ತು ಮುಗಿಸಿ ಹೊರಬರುತ್ತಿದ್ದಂತೆಯೇ ಹೊಂಚು ಹಾಕಿ ಕುಳಿತಿದ್ದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಪಿಸ್ತೂಲ್ಗಳಿಂದ ಗುಂಡಿನ ಸುರಿಮಳೆ ಗೈದಿದ್ದಾರೆ. ದಾಳಿ ನಡೆಸಿದ ಬಳಿಕ ನಾಲ್ವರೂ ಓಡಿ ತಪ್ಪಿಸಿಕೊಂಡಿದ್ದಾರೆ.
ಅಂಕಿತ್ ಅವರು, ಹರಿಯಾಣದ ರೋಹಕ್ ಮತ್ತು ಸೋನಿಪತ್ನಲ್ಲಿ ನೆಲೆಸಿದ್ದರು. ಹರಿಯಾಣವಿ ಶೈಲಿಯ ‘ಭಾರಿ ಕೋರ್ಟ್ ಮೇ ಗೋಲಿ ಮಾರೇಂಗೆ ಮೇರಿ ಜಾನ್ ಸೇರಿದಂತೆ ಹಲವು ಜನಪ್ರಿಯ ಹಾಡುಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಇತ್ತೀಚೆಗೆ ಅವರು ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.
ಅಂಕಿತ್ ಅವರ ಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.



