*ಸಚಿವ ಬಿ. ನಾಗೇಂದ್ರ ರಾಜೀನಾಮೆ: ಶೀಘ್ರದಲ್ಲೇ ಇಬ್ಬರಿಗೆ ಸಚಿವ ಸ್ಥಾನ*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದ್ದು, ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಬಗ್ಗೆ ವರಿಷ್ಠರ ಜೊತೆ ಮಹತ್ವದ ಚರ್ಚೆ ನಡೆಸಿ, ಸ್ಪಷ್ಟ ಸಂದೇಶದೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ. ಜೊತೆಗೆ ಸಂಪುಟಕ್ಕೆ ಮಿನಿ ಸರ್ಜರಿ ನಡೆಯಲಿದೆ.
ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ನಾಗೇಂದ್ರ ಅವರು ಸ್ಥಾನದಿಂದ ಕೆಳಗಿಳಿಯುವುದು ಸೂಕ್ತ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದ್ದು ಇನ್ನು ಒಂದೆರಡು ದಿನಗಳಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಪ್ರಕರಣದ ತನಿಖೆ ಸದ್ಯ ಯಾವ ಹಂತದಲ್ಲಿದೆ, ವಿರೋಧ ಪಕ್ಷಗಳ ನಿರಂತರ ಹೋರಾಟದಿಂದ ಸರ್ಕಾರಕ್ಕೆ ಆಗುತ್ತಿರುವ ರಾಜಕೀಯ ಡ್ಯಾಮೇಜ್ ಮತ್ತು ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಕಾನೂನು ತೊಡಕುಗಳ ಬಗ್ಗೆ ಹೈಕಮಾಂಡ್ ನಾಯಕರು ಸಿಎಂ ಡಿಕೆಶಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ವಿಶೇಷವಾಗಿ, ನಾಗೇಂದ್ರ ವಿರುದ್ಧ ತನಿಖೆ ಮುಂದುವರಿಸಲು ಸಿಬಿಐ ರಾಜ್ಯಪಾಲರ ಅನುಮತಿ ಕೇಳಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ. ಒಂದು ವೇಳೆ ರಾಜ್ಯಪಾಲರು ಅನುಮತಿ ನೀಡಿದರೆ ಸರ್ಕಾರಕ್ಕೆ ದೊಡ್ಡ ಮುಜುಗರವಾಗಲಿದೆ. ಅಲ್ಲದೆ, ಬಿಜೆಪಿ ಕೂಡ ಪಾದಯಾತ್ರೆ ಮೂಲಕ ಸರ್ಕಾರದ ವಿರುದ್ಧ ಸಮರ ಸಾರಿರುವುದರಿಂದ, ವಿಪಕ್ಷಗಳ ಕೈಯಿಂದ ಈ ಪ್ರಮುಖ ಅಸ್ತ್ರವನ್ನು ಕಸಿದುಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ರಾಜೀನಾಮೆ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ.
ವ್ಯಕ್ತಿಗಿಂತ ಪಕ್ಷ ಹಾಗೂ ಸರ್ಕಾರವೇ ಮುಖ್ಯ ಎಂಬ ನಿಲುವಿಗೆ ಬಂದಿರುವ ಕಾಂಗ್ರೆಸ್ ನಾಯಕರು, ಈ ಸಂದೇಶವನ್ನು ಈಗಾಗಲೇ ನಾಗೇಂದ್ರ ಅವರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ರಾಜೀನಾಮೆಯನ್ನು ತಪ್ಪೊಪ್ಪಿಗೆಯಂತೆ ಬಿಂಬಿಸದೆ, ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತಪ್ಪಿಸುವ ನಿಟ್ಟಿನಲ್ಲಿ ಮಾಡಿದ ತ್ಯಾಗ ಎಂಬಂತೆ ಪ್ರಸ್ತುತಪಡಿಸುವ ತಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ದೆಹಲಿಯಲ್ಲಿ ಮಾತನಾಡಿದ್ದ ಸಿಎಂ ಡಿಕೆಶಿ ಕೂಡ ‘ನಾಗೇಂದ್ರ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಹೇಳಿರುವುದು ಈ ಬೆಳವಣಿಗೆಗಳಿಗೆ ಪುಷ್ಟಿ ನೀಡಿದೆ. ಒಟ್ಟಿನಲ್ಲಿ ಮುಂಬರುವ ರಾಜಕೀಯ ಮತ್ತು ಕಾನೂನು ಸಂಕಷ್ಟಗಳಿಂದ ಪಾರಾಗಲು ಕಾಂಗ್ರೆಸ್ ಈ ‘ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದು, ಶೀಘ್ರದಲ್ಲೇ ನಾಗೇಂದ್ರ ಅವರ ಅಧಿಕೃತ ಪದತ್ಯಾಗ ಹೊರಬೀಳುವ ನಿರೀಕ್ಷೆಯಿದೆ.
ಇಬ್ಬರಿಗೆ ಸ್ಥಾನ
ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಅದೇ ಪರಿಶಿಷ್ಟ ಪಂಗಡದ ಕೋಟಾದಲ್ಲಿ ಅನ್ನಪೂರ್ಣ ತುಕಾರಾಂ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯ ಉಳಿಸಿಕೊಳ್ಳುವ ಜತೆಗೆ, ಕ್ಯಾಬಿನೆಟ್ನಲ್ಲಿ ಇಬ್ಬರು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಲೆಕ್ಕಾಚಾರ ಸಹ ನಡೆದಿದೆ. ಹಾಗಾದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಅನ್ನಪೂರ್ಣಾ ತುಕಾರಾಮ್ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಬ್ಯಾಡಗಿಯ ಬಸವರಾಜ ನೀಲಪ್ಪ ಶಿವಣ್ಣವರ್ ಅವರಿಗೆ ಅವಕಾಶ ನೀಡಬೇಕು ಎಂಬ ತಮ್ಮ ಸಲಹೆಯನ್ನು ಪರಿಗಣಿಸಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸುವ ಯತ್ನವನ್ನೂ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.



