*ಪಶು ವೈದ್ಯರ ನೇಮಕಾತಿ ಹಗರಣದಲ್ಲಿ ಬಿಜೆಪಿ ಕಾರ್ಯಕರ್ತ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಪಶು ವೈದ್ಯರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಬಂಧನವಾದ ಬಳಿಕ ಸಿಐಡಿ ತಂಡ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದೆ.
ಭಾಲ್ಕಿ ಮೂಲದ ಆರೋಪಿಯೊಬ್ಬನನ್ನು ಸಿಐಡಿ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಅಭ್ಯರ್ಥಿಗಳು ಹಾಗೂ ಗ್ಯಾನೇಂದ್ರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಬಿಜೆಪಿ ಕಾರ್ಯಕರ್ತ ಬಸವರಾಜ್ ಕನ್ನಾಳೆಯನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
12ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗ್ಯಾನೇಂದ್ರ ಜೊತೆಗೆ ಬಸವರಾಜ್ ಸಂಪರ್ಕ ಮಾಡಿಕೊಟ್ಟಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಗ್ಯಾನೇಂದ್ರ ಕುಮಾರ್ ಗಂಗ್ವಾರ ಬಂಧನ ಬೆನ್ನಲ್ಲೇ ಬಸವರಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾಲ್ಕಿ ಪಟ್ಟಣದ ಲೆಕ್ಷರ್ ಕಾಲೋನಿಯ ಆರೋಪಿ ನಿವಾಸ ಮತ್ತು ದೋಣಗಾಪೂರ್ ಗ್ರಾಮದ ನಿವಾಸದಲ್ಲಿ ಪೊಲೀಸರಿಂದ ತಪಾಸಣೆ ಮಾಡಲಾಗಿದೆ. ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಎರಡು ನಿವಾಸಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.




