*ಗಂಗಾವಳಿ–ಕರಾವಳಿ ಉಳಿವಿಗಾಗಿ ಸೆ.3ರಂದು ಬೃಹತ್ ಜಾಗೃತಿ ಜಾಥಾ*

ಗಂಗಾವಳಿ–ಕರಾವಳಿ ಉಳಿವಿಗಾಗಿ ಸೆ.3ರಂದು ಬೃಹತ್ ಜಾಗೃತಿ ಜಾಥಾ
ಕಾರವಾರ–ಅಂಕೋಲಾ–ಗೋಕರ್ಣ ಚಲೋಗೆ ಕರೆ | ಪರಿಸರ ಸಂರಕ್ಷಣೆಗೆ 500ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ
ಪ್ರಗತಿವಾಹಿನಿ ಸುದ್ದಿ/
ಶಿರಸಿ: ಗಂಗಾವಳಿ–ಕರಾವಳಿ ಪ್ರದೇಶವನ್ನು ಉಳಿಸುವ ನಿಟ್ಟಿನಲ್ಲಿ ಅವೈಜ್ಞಾನಿಕ ಯೋಜನೆಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 3ರಂದು ಕಾರವಾರ, ಅಂಕೋಲಾ ಹಾಗೂ ಗೋಕರ್ಣ ಚಲೋ ಬೃಹತ್ ಜಾಗೃತಿ ಜಾಥಾ ಆಯೋಜಿಸಲಾಗಿದೆ.
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನ ಹಾಗೂ ಆದೇಶದಂತೆ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.
ಗಂಗಾವಳಿ ಸೇರಿದಂತೆ ಕರಾವಳಿ ಭಾಗದ ನದಿಗಳು, ಅರಣ್ಯ ಮತ್ತು ಪರಿಸರ ವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ಅವೈಜ್ಞಾನಿಕ ಯೋಜನೆಗಳನ್ನು ವಿರೋಧಿಸಿ ಜನಜಾಗೃತಿ ಮೂಡಿಸುವುದು ಜಾಥಾದ ಪ್ರಮುಖ ಉದ್ದೇಶವಾಗಿದೆ. ನದಿಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮುಂದಿನ ಪೀಳಿಗೆಯ ಬದುಕಿನೊಂದಿಗೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ ಇದು ಯಾವುದೇ ಒಂದು ವರ್ಗಕ್ಕೆ ಸೀಮಿತವಾದ ಹೋರಾಟವಲ್ಲ, ಎಲ್ಲರ ಅಳಿವು–ಉಳಿವಿನ ಪ್ರಶ್ನೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಾಥಾದ ಕಾರ್ಯಕ್ರಮ
ಸೆಪ್ಟೆಂಬರ್ 3ರಂದು ಬೆಳಿಗ್ಗೆ 9.30ಕ್ಕೆ ಗೋಕರ್ಣ ತಲುಪಲಿರುವ ಜಾಥಾದಲ್ಲಿ ಉಪಹಾರದ ಬಳಿಕ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗುವುದು. ನಂತರ ಕಾರವಾರಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಗರಸಭೆಗೆ ಮನವಿ ಸಲ್ಲಿಸಿ, ಜಿಲ್ಲಾಧಿಕಾರಿಗಳಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಲಾಗುತ್ತದೆ. ಬಳಿಕ ಬೃಹತ್ ಸಭೆ ನಡೆಯಲಿದೆ. ಕಾರವಾರದ ಪ್ರಮುಖರ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 3.30ಕ್ಕೆ ಅಂಕೋಲಾ ತಾಲೂಕು ಪಂಚಾಯಿತಿಗೆ ತೆರಳಿ ಮನವಿ ಸಲ್ಲಿಸಿದ ಬಳಿಕ ಜಾಥಾ ವಾಪಸಾಗಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ
ಜಾಥಾದಲ್ಲಿ 16 ಸೀಮೆಗಳ ಎಲ್ಲಾ ಶಿಷ್ಯರು, ರಾಮಕ್ಷತ್ರಿಯ ಸಮಾಜ, ಸಿದ್ಧಿ ಸಮಾಜ, ಕುಣಬಿ, ಮರಾಠಿ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಬಂಧುಗಳು, ತಾಯಂದಿರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.
ಕುಳಿನಾಡು, ಕರೂರು ಹಾಗೂ ಭರತನಹಳ್ಳಿ ಸೀಮೆಗಳು ಈಗಾಗಲೇ ಜಾಥಾದ ಸಿದ್ಧತೆಗಳನ್ನು ಆರಂಭಿಸಿದ್ದು, ಪ್ರತಿಯೊಂದು ಸೀಮೆಯಿಂದ ಕನಿಷ್ಠ 15 ವಾಹನಗಳಲ್ಲಿ 75ಕ್ಕೂ ಅಧಿಕ ಮಂದಿ ಭಾಗವಹಿಸುವಂತೆ ಹಾಗೂ ಭಾಗೀ ಸೀಮೆಗಳಿಂದ ಕನಿಷ್ಠ 25 ಮಂದಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
ಪರಿಸರ ಸಂರಕ್ಷಣೆಯ ಈ ಹೋರಾಟದಲ್ಲಿ 500ಕ್ಕೂ ಅಧಿಕ ಮಂದಿ ಒಂದೇ ಕುಟುಂಬದಂತೆ ಒಗ್ಗೂಡಿ ಭಾಗವಹಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳೂ ಜಾಥಾದೊಂದಿಗೆ ಕೈಜೋಡಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಮುಖರು ಹಾಗೂ ಸೀಮಾಧ್ಯಕ್ಷರು ಸೆಪ್ಟೆಂಬರ್ 1ರೊಳಗೆ ತಮ್ಮ ತಮ್ಮ ಸೀಮೆಗಳಿಂದ ಭಾಗವಹಿಸುವ ವಾಹನಗಳು ಮತ್ತು ಜನರ ನಿಖರ ಮಾಹಿತಿಯನ್ನು ಸಮಿತಿಗೆ ತಲುಪಿಸುವಂತೆ ಸೂಚಿಸಲಾಗಿದೆ.
“ನದಿ ನಮ್ಮ ಜೀವ, ನಿಸರ್ಗ ನಮ್ಮ ಹೆಮ್ಮೆ. ನದಿಗಳನ್ನು ಉಳಿಸಿ, ನಾಡನ್ನು ಉಳಿಸೋಣ. ಮುಂದಿನ ಪೀಳಿಗೆಯ ಬದುಕಿಗಾಗಿ ಒಗ್ಗಟ್ಟಿನಿಂದ ಹೋರಾಡೋಣ” ಎಂಬ ಸಂದೇಶದೊಂದಿಗೆ ಜಾಥಾವನ್ನು ಯಶಸ್ವಿಗೊಳಿಸುವಂತೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಕರೆ ನೀಡಿದೆ.
ಜಾಥಾದಲ್ಲಿ “ನದಿಗಳು ಉಳಿದರೆ ಉಳಿವುದು ನಾಡು–ನದಿಗಳು ಅಳಿದರೆ ಅಳಿವುದು ನಾಡು”, “ನದಿ ಉಳಿಸಿ–ನಾಡು ಉಳಿಸಿ, ಮುಂದಿನ ಪೀಳಿಗೆಗೆ ಬದುಕು ಉಳಿಸಿ”, “ಪರಿಸರ ಉಳಿಯಲಿ–ಪರಂಪರೆ ಬೆಳೆಯಲಿ”, “ಗಂಗಾವಳಿ ಉಳಿಸಿರಿ–ಕರಾವಳಿ ಬೆಳೆಸಿರಿ” ಸೇರಿದಂತೆ ವಿವಿಧ ಪರಿಸರ ಸಂರಕ್ಷಣಾ ಘೋಷಣೆಗಳನ್ನು ಮೊಳಗಿಸಲಾಗುವುದು.




