Belagavi NewsBelgaum NewsCrimeKarnataka NewsLatest

*ಸ್ನೇಹಿತನನ್ನೇ ಇರಿದು ಕೊಂದ ವ್ಯಕ್ತಿ; ವೆಲ್ಡಿಂಗ್ ಮಾಡುವಾಗ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ದುರುಳ*

ಪ್ರಗತಿವಾಹಿನಿ ಸುದ್ದಿ: ಕುಡಿದ ಮತ್ತಿನಲ್ಲಿ ಚಿಕನ್ ಪೀಸ್​ ವಿಚಾರಕ್ಕೆ ಸ್ನೇಹಿತನನ್ನೇ ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಪಿಲಿಭಿತ್ ಜಿಲ್ಲೆಯ ಕಬೀರ್ ಗಂಜ್ ಗ್ರಾಮದ ಸತಿರಾಮ್(ಸೀತಾರಾಮ್) ಚಂದ್ರದೇವ್ ಕೊಲೆಯಾದ ದುರ್ದೈವಿ. ಅದೇ ಊರಿನ ಅರುಣಕುಮಾರ್ ಬಲಿಷ್ಟರ್ ಚವ್ಹಾಣ ಕೊಲೆ ಮಾಡಿರುವ ಆರೋಪಿ.

ಹುಣಶ್ಯಾಳ ಪಿಜಿ ಗ್ರಾಮದ ಪ್ರಿಯಾ ಸ್ಟೀಲ್ಸ್ ಫ್ಯಾಕ್ಟರಿಯಲ್ಲಿ ಈ ಇಬ್ಬರು ಕೆಲಸ ಮಾಡುತ್ತಿದ್ದರು. ಇವರ ಜೊತೆಗೆ ಇನ್ನೂ ನಾಲ್ಕೈದು ಜನರು ಇದ್ದರು. ಆಗಸ್ಟ್ 23ರಂದು ತಾವು ವಾಸಿಸುವ ಶೆಡ್​​ನಲ್ಲಿ ಚಿಕನ್-ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಉಳಿದವರು ಊಟ ಮುಗಿಸಿ ಹೋದ ಮೇಲೆ, ಅರುಣಕುಮಾರ್​​ ಮತ್ತು ಸೀತಾರಾಮ್ ನಡುವೆ ಕುಡಿದ ಮತ್ತಿನಲ್ಲಿ ಚಿಕನ್ ತಿನ್ನುವ ವಿಚಾರಕ್ಕೆ ಜಗಳ ಶುರುವಾಗಿದೆ. ಮಾತಿಗೆ, ಮಾತು ಬೆಳೆದಿದೆ. ಬಳಿಕ ಅಲ್ಲಿಯೇ ಇದ್ದ ಚಾಕುವಿನಿಂದ ಸೀತಾರಾಮ್​ನ ಎದೆಗೆ ಅರುಣಕುಮಾರ್ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೊಲೆಗೈದ ಬಳಿಕ ಆರೋಪಿ ಅರುಣಕುಮಾರ್​, ಮೃತ ಸೀತಾರಾಮ್ ಅವರ ಮೃತದೇಹವನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾನೆ ಅಂತಾ ಅಲ್ಲಿನ ವೈದ್ಯರಿಗೆ ಸುಳ್ಳು ಹೇಳಿ, ಸಹಜ ಸಾವು ಅಂತಾ ಎಂಎಲ್​ಸಿ ಮಾಡಿಸಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಸಂಚು ರೂಪಿಸಿದ್ದ.

ಪೊಲೀಸರು ಹೋಗಿ ಮೃತದೇಹ ಪರೀಕ್ಷಿಸಿದಾಗ, ಎದೆ ಮೇಲೆ ಬಲವಾದ ಗಾಯದ ಗುರುತು ಕಂಡಿದೆ. ಅನುಮಾನ ಬಂದು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಮೇಲಿನಿಂದ ಬಿದ್ದು ಮೃತಪಟ್ಟಿಲ್ಲ ಎಂಬುದು ಸ್ಪಷ್ಟವಾಗುಗಿದೆ. ಘಟಪ್ರಭಾ ಠಾಣೆ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button