Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿಯ ಮಹಿಳಾ ಪೊಲೀಸರಿಗೆ ಕ್ಯಾನ್ಸರ್ ತಪಾಸಣಾ ಶಿಬಿರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಆಯೋಜಿಸಲಾಗಿರುವ ಐದು ದಿನಗಳ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಇಂದು ಉದ್ಘಾಟಿಸಿದರು.

SSO ಬೆಳಗಾವಿ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಮಹಿಳೆಯರಲ್ಲಿ ಕಂಡುಬರುವ ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ಹಾಗೂ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.

Home add -Advt

ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಡಾ. ಜಾಗೇಶ್ವರ ಪಾಂಡೆ, ಆಡಳಿತ ಮುಖ್ಯಸ್ಥರಾದ ಲಿಂಗರಾಜ್ ಕಲ್ಯಾಣ ಹಾಗೂ ಸರ್ಜಿಕಲ್ ಆಂಕಾಲಜಿಸ್ಟ್ ಡಾ. ವೀರೇಶ್ ಇರಡ್ಡಿ ಅವರ ನೇತೃತ್ವದ ವೈದ್ಯಕೀಯ ತಂಡವು ಶಿಬಿರದಲ್ಲಿ ತಪಾಸಣೆ ನಡೆಸಿತು.

ಮಹಿಳೆಯರಲ್ಲಿ ಕಂಡುಬರುವ ವಿವಿಧ ರೀತಿಯ ಕ್ಯಾನ್ಸರ್‌ಗಳ ತಪಾಸಣೆಯ ಜೊತೆಗೆ, ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು, ಮುನ್ನೆಚ್ಚರಿಕೆ ಹಾಗೂ ಸಕಾಲಿಕ ತಪಾಸಣೆಯ ಮಹತ್ವದ ಕುರಿತು ಅಗತ್ಯ ವೈದ್ಯಕೀಯ ಮಾರ್ಗದರ್ಶನ ನೀಡಲಾಗುತ್ತಿದೆ.

ಈ ಶಿಬಿರವು ಐದು ದಿನಗಳ ಕಾಲ ನಡೆಯಲಿದ್ದು, ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ಸುಮಾರು 200 ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಇದರ ಪ್ರಯೋಜನ ಪಡೆಯಲಿದ್ದಾರೆ.

ಪೊಲೀಸ್ ಸಿಬ್ಬಂದಿಯ ಆರೋಗ್ಯ ಮತ್ತು ಕ್ಷೇಮದ ದೃಷ್ಟಿಯಿಂದ SSO ಬೆಳಗಾವಿ ಕ್ಯಾನ್ಸರ್ ಆಸ್ಪತ್ರೆ ಕೈಗೊಂಡಿರುವ ಈ ಸಾಮಾಜಿಕ ಕಳಕಳಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಇಲಾಖೆ ಶ್ಲಾಘಿಸುತ್ತಿದೆ.

ಕರ್ತವ್ಯದ ಒತ್ತಡ ಮತ್ತು ಬಿಡುವಿಲ್ಲದ ಕಾರ್ಯನಿರ್ವಹಣೆಯಿಂದಾಗಿ ಪೊಲೀಸ್ ಸಿಬ್ಬಂದಿಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದ ಸಂದರ್ಭಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಇಂತಹ ಮುನ್ನೆಚ್ಚರಿಕಾ ಆರೋಗ್ಯ ತಪಾಸಣಾ ಶಿಬಿರಗಳು ಅತ್ಯಂತ ಉಪಯುಕ್ತವಾಗಿವೆ.

ಮಹಿಳಾ ಪೊಲೀಸ್ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಿ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿರುವ SSO ಬೆಳಗಾವಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು, ಆಡಳಿತ ಮಂಡಳಿ ಹಾಗೂ ಸಂಪೂರ್ಣ ವೈದ್ಯಕೀಯ ತಂಡಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಕೃತಜ್ಞತೆ ಸಲ್ಲಿಸಿದರು.

Related Articles

Back to top button