
ಪ್ರಗತಿವಾಹಿನಿ ಸುದ್ದಿ: ಸಣ್ಣ ವಿಮಾನವೊಂದು ಪತನಗೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ಈ ದುರಂತ ಸಂಭವಿಸಿದೆ. ಬ್ಲೈಥ್ ಅವೆನ್ಯೂದಲ್ಲಿರುವ ‘ಸಿಯೆರಾ ಸ್ಕೈ ಪಾರ್ಕ್’ ವಿಮಾನ ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದ್ದು, ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಮಾನದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮೃತರ ಮತ್ತು ಗಾಯಾಳುಗಳ ವಿವರಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ಫ್ರೆಸ್ನೋ ಪೊಲೀಸ್, ಅಗ್ನಿಶಾಮಕ ದಳ ಮತ್ತು ಕೌಂಟಿ ಶೆರಿಫ್ ಕಚೇರಿ ಸೇರಿದಂತೆ ಹಲವು ತುರ್ತು ರಕ್ಷಣಾ ಸಂಸ್ಥೆಗಳು ಜಂಟಿಯಾಗಿ ಪರಿಹಾರ ಕಾರ್ಯಾಚರಣೆ ನಡೆಸಿವೆ.
ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಹವಾಮಾನ ವೈಪರೀತ್ಯವೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಅಮೆರಿಕದ ವಾಯುಯಾನ ನಿಯಂತ್ರಣ ಸಂಸ್ಥೆಗಳು ಅಪಘಾತದ ನಿಖರ ಕಾರಣ ತಿಳಿಯಲು ಪರಿಶೀಲನೆ ನಡೆಸುತ್ತಿವೆ.



