*ವಿಟ್ಲಪಿಂಡಿ ಉತ್ಸವದ ವೇಳೆ ಅವಘಡ: ಸ್ವಾಮೀಜಿಗಳ ಕೈಯಿಂದ ಜಾರಿ ಬಿದ್ದು ಭಗ್ನಗೊಂಡ ಕೃಷ್ಣನ ಮೂರ್ತಿ*

ಪ್ರಗತಿವಾಹಿನಿ ಸುದ್ದಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ವೇಳೆ ಅವಘಡ ಸಂಭವಿಸಿದ್ದು, ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಕೃಷ್ಣ ಮೂರ್ತಿ ಕೆಳಗೆ ಬಿದ್ದು, ಭಗ್ನಗೊಂಡಿದೆ.
ವಿಟ್ಲಪಿಂಡಿ ಉತ್ಸವದ ವೇಳೆ ಚಿನ್ನದ ರಥದಲ್ಲಿ ರಥಾರೂಢವಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಉತ್ಸವದ ಬಳಿಕ ಇಳಿಸುವ ವೇಳೆ, ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಮೂರ್ತಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ಭಗ್ನವಾಗಿದೆ. ಘಟನೆ ಕಂಡು ಸ್ಥಳದಲ್ಲಿದ್ದ ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ವಿಟ್ಲಪಿಂಡಿ ಮಹೋತ್ಸವ ನಿನ್ನೆ ಅದ್ಧೂರಿಯಾಗಿ ನಡೆಯಿತು. ಚಾತುರ್ಮಾಸದ ಹಿನ್ನೆಲೆ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿ ರಥಾರೂಢಗೊಳಿಸಿ, ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ರಥೋತ್ಸವದ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಥದಿಂದ ಇಳಿಸಿ, ಮಧ್ವ ಸರೋವರದಲ್ಲಿ ವಿಸರ್ಜನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಕೃಷ್ಣನ ಮೂರ್ತಿ ಜಾರಿ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ರಭಸಕ್ಕೆ ಮಣ್ಣಿನಿಂದ ಮಾಡಲಾಗಿದ್ದ ಕೃಷ್ಣನ ಮೂರ್ತಿ ಭಗ್ನವಾಗಿದೆ. ಇದರಿಂದಾಗಿ ನೆರೆದಿದ್ದ ಲಕ್ಷಾಂತರ ಭಕ್ತರಲ್ಲಿ ಕೆಲ ಕಾಲ ಗಾಬರಿ, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆಯಿತು.




