
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಗಣೇಶೋತ್ಸವ ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಈ ಬಾರಿಯೂ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಈ ಬಾರಿ ಬೆಳಗಾವಿ ನಗರದಲ್ಲಿ ಒಟ್ಟು 1,156 ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗುತ್ತಿದ್ದು, ಶಾಂತಿಯುತ ಗಣೇಶೋತ್ಸವ ಆಚರಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಈ ಕುರಿತು ನಗರದ ಎಸ್ಪಿ ಪೊಲೀಸ್ ಕವಾಯತ್ತು ಮೈದಾನದಲ್ಲಿ ಮಾಧ್ಯಮಗೋಪ್ಠಿ ನಡೆಸಿ ಮಾತನಾಡಿದ ಪೊಲೀಸ್ ಕಮಿಷನರ್ ಪ್ರಕಾಶ ನಿಕ್ಕಂ ಅವರು, ಇಂದಿನಿಂದ 24ರವರೆಗೆ ಮೊದಲ ಹಂತ, ಸೆ.25-27ರವರೆಗೆ ಎರಡನೇ ಹಂತ, ಹೀಗೆ ಎರಡು ಹಂತಗಳಲ್ಲಿ ಬಂದೋಬಸ್ತ್ ಕೈಗೊಳ್ಳುತ್ತೇವೆ. 3 ಡಿಸಿಪಿ, 6 ಎಸಿಪಿ, 23 ಪಿಐ, 44 ಪಿಎಸ್ಐ, 155 ಎಎಸ್ಐ ಸೇರಿ ನಮ್ಮ ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಒಟ್ಟು 1300 ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇವರ ಜೊತೆಗೆ ಬೇರೆ ಜಿಲ್ಲೆಯ 400 ಹೋಮ್ ಗಾರ್ಡ್ಸ್. ಮೈಸೂರು, ಕಲಬುರ್ಗಿ ವಲಯಗಳ 400 ಎಎಸ್ಐ, ಹೆಡ್ ಕಾನ್ಸಟೇಬಲ್, ಕಾನ್ಸಟೇಬಲ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೇ 10 ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್ ಆರ್ ಪಿ) ತುಕಡಿಗಳು, 26 ಜಿಲ್ಲಾ ಸಶಸ್ತ್ರ ಮೀಸಲು(ಡಿಎಆರ್) ತುಕಡಿಗಳು, ಕ್ಷೀಪ್ರ ಕಾರ್ಯಾಚರಣೆ ಪಡೆ(ಆರ್ ಎಎಫ್) 1 ಕಂಪನಿ ಜೊತೆಗೆ ಸಂಚಾರ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಆಗಿ 24/7 150 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ತಮ್ಮ ವೈಯಕ್ತಿಕ ಭದ್ರತೆಗಾಗಿ ಅಂಗಡಿ, ವಾಣಿಜ್ಯ ಸಂಕೀರಣ, ಬಹುಮಹಡಿ ಕಟ್ಟಡ, ಮನೆ, ಹೋಟೆಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ 25 ಸಾವಿರ ಸಿಸಿ ಕ್ಯಾಮರಾಗಳ ಜೊತೆಗೆ, ನಗರದ ಅತೀ ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸಿರುವ 1260 ಸಿಸಿಟಿವಿ ಕ್ಯಾಮರಾಗಳ ಮೇಲೆ ನಿರಂತರವಾಗಿ ನಿಗಾ ವಹಿಸಲಾಗುತ್ತದೆ. ವಿಸರ್ಜನಾ ಮೆರವಣಿಗೆ ದಿನ 10 ಡ್ರೋನ್ ಕ್ಯಾಮರಾಗಳನ್ನು ಬಳಸಿಕೊಳ್ಳುತ್ತೇವೆ ಎಂದರು.
ಮುಂಜಾಗ್ರತಾ ಕ್ರಮವಾಗಿ 24 ರೌಡಿಗಳನ್ನು ಈಗಾಗಲೇ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಜೊತೆಗೆ 1 ಗೂಂಡಾ ಕಾಯ್ದೆ ಹಾಗೂ 1 ಕೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರದಲ್ಲಿ 1099 ರೌಡಿಗಳು ಇದ್ದು, ಅವರ ಮೇಲೆ ಮುಂಜಾಗ್ರತಾ ಅಡಿಯಲ್ಲಿ ಪಿಎಆರ್ ಗಳನ್ನು ದಾಖಲಿಸಿ ಬಾಂಡ್ ಓವರ ಮಾಡಲಾಗಿದೆ. ಬಾಂಡ್ ಓವರ್ ಉಲ್ಲಂಘನೆ ಮಾಡಿದ ರೌಡಿಗಳಿಂದ ರೂ. 3 ಲಕ್ಷ 65 ಸಾವಿರ ರೂ. ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಯಾವುದೇ ವ್ಯಕ್ತಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸಿದರೆ, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದರು.
ನಗರದಲ್ಲಿ 32 ಸೆಕ್ಟರಗಳಿಗೆ ಪಿಎಸ್‌ಐ/ಎಎಸ್‌ಐ ಗಳನ್ನು ನೇಮಿಸಿದ್ದು, ಅವರ ಉಸ್ತುವಾರಿಯನ್ನು ಉಪವಿಭಾಗವಾರು 6 ಸಿಪಿಐ ಹಾಗೂ ಇಬ್ಬರು ಎಸಿಪಿಗಳು ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. 120 ಫಿಕ್ಸ್ ಪಾಯಿಂಟ್ ಗಳನ್ನು ನಿಯೋಜಿಸಿದ್ದು, ಎಲ್ಲ ಗಣೇಶ ಮಂಟಪಗಳಲ್ಲಿ 3 ಶಿಪ್ಟ್ ನಲ್ಲಿ ಕನಿಷ್ಟ ಇಬ್ಬರು ಸಿಬ್ಬಂದಿಗಳು, 24 ಗಂಟೆ ಕರ್ತವ್ಯ ನಿರ್ವಹಿಸಲಿದ್ದಾರೆ. ನಗರದ ಎಲ್ಲ ಧಾರ್ಮಿಕ ಸ್ಥಳಗಳಿಗೆ, ಗಣ್ಯರ ಮೂರ್ತಿಗಳಿಗೆ ಬಂದೋಬಸ್ತ ನಿಯೋಜನೆ ಮಾಡಲಾಗಿದೆ. ಬೆಳಗಾವಿ ನಗರದ ಹೊರವಲಯದಲ್ಲಿ ನಗರಕ್ಕೆ ಬರುವ ಹಾಗೂ ಹೋಗುವ ಸಂಶಯಾಸ್ಪದ ವ್ಯಕ್ತಿಗಳನ್ನು ಹಾಗೂ ವಾಹನಗಳನ್ನು ತಪಾಸನೆ ಮಾಡಲು 19 ಚೆಕ್‌ಪೋಸ್ಟಗಳನ್ನು ಪ್ರಾರಂಭಿಸಲಾಗಿದ್ದು, ಅವು 24 ಗಂಟೆ ಅಲರ್ಟ್ ಆಗಿರುತ್ತವೆ ಎಂದು ಪೊಲೀಸ್ ಕಮಿಷನರ್ ವಿವರಿಸಿದರು.
ಸಾಂಪ್ರದಾಯಿಕ ಕಲಾತಂಡಗಳನ್ನು ಬಳಸುವ, ಸಾಮಾಜಿಕ ಸಂದೇಶ ಸಾರುವ ಮೂರು ಗಣೇಶ ಮಂಡಳಿಗಳಿಗೆ ಬಹುಮಾನ ವಿತರಿಸುತ್ತೇವೆ ಎಂದ ಪೊಲೀಸ್ ಕಮಿಷನರ್ ಅವರು, ನ್ಯಾಯಾಲಯದ ಆದೇಶ ಮೀರಿ ಹೆಚ್ಚು ಡೆಸಿಬಲ್ ಸೌಂಡ್ ಹಚ್ಚಿದ ಡಾಲ್ಬಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲದೇ ಪ್ಲಾಸ್ಮಾ, ಲೇಸರ್ ಲೈಟ್ ಬಳಸಿದರೆ ತಕ್ಷಣ ಅಂತಹ ಡಾಲ್ಬಿ ಸೀಜ್ ಮಾಡುತ್ತೇವೆ ಎಂದು ಎಚ್ಚರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಡಿಸಿಪಿ ನಾರಾಯಣ ಬರಮನಿ, ಡಿಸಿಪಿ ನಿರಂಜನ್ ರಾಜೆ ಅರಸ್, ಡಿಸಿಪಿ ಎಂ.ವೈ.ಕಾಶಪ್ಪನವರ ಸೇರಿ ಮತ್ತಿತರರು ಇದ್ದರು.



