*ಗಣಪತಿ ಹಬ್ಬಕ್ಕೆ ಕಂಡೀಷನ್ ಹಾಕುವ ಸರ್ಕಾರ ಈದ್ ಮಿಲಾದ್ಗೆ ಯಾಕೆ ಹಾಕಲ್ಲ: ಆರ್ ಅಶೋಕ*

ಪ್ರಗತಿವಾಹಿನಿ ಸುದ್ದಿ: ಗಣಪತಿ ಮೆರವಣಿಗೆಗೆ ಕಂಡೀಷನ್ ಹಾಕುವ ಸರ್ಕಾರ, ಈದ್ ಮಿಲಾದ್ಗೆ ಯಾಕೆ ಹಾಕಲ್ಲ?, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತಾನಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ನಿಯಮಗಳನ್ನ ಹೇರಿ ಗಣೇಶ ಹಬ್ಬ ಆಚರಣೆ ಮಾಡದಂತೆ ಮಾಡಿದ್ದಾರೆ. ಪ್ರಸಕ್ತ ವರ್ಷ ಶೇ.25ರಷ್ಟು ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ಶೇ.75ರಷ್ಟು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿಲ್ಲ.
ಯಾಕಂದ್ರೆ ಜಿಬಿಎನವರದ್ದು ಒಂದು ರೂಲ್ಸ್, ಬೆಸ್ಕಾಂನದ್ದು ಒಂದು ರೂಲ್ಸ್. ನೂರಾರು ರೂಲ್ಸ್ ಮಾಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ ಮಾಡಿದ್ದಾರೆ. ಹಿಂದೂ ವಿರೋಧಿ ಸರ್ಕಾರಕ್ಕೆ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ.
ಮುಸ್ಲಿಮರು ವರ್ಷದ 365 ದಿನ ಮೈಕ್ ಹಾಕ್ತಾರೆ, ಯಾರೂ ಕೇಳಲ್ಲ. ಆದರೆ ಹಿಂದೂಗಳ ಹಬ್ಬ ಆಚರಣೆಗೆ ನಿಯಮಗಳ ಹೆಸರಿನಲ್ಲಿ ಅಡ್ಡಿಪಡಿಸಲಾಗ್ತಿದೆ ಎಂದು ಕಿಡಿ ಕಾರಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ, ಹಿಂದೂ ವಿರೋಧಿ ಸರ್ಕಾರ: ಪ್ರತಿಪಕ್ಷ ನಾಯಕ ಆರ್.ಅಶೋಕ
ಗಣೇಶ ಚೌತಿ ಪೊಲೀಸರ ಹಬ್ಬವಾಗಬಾರದು, ಇದು ಜನರ ಹಬ್ಬ
ಟಿ.ನರಸೀಪುರದಲ್ಲಿ ಗಣೇಶ ಹಬ್ಬದ ಮೆರವಣಿಗೆಗೆ ನಿರ್ಬಂಧ ವಿಧಿಸಿದ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆ ಮಾಡಿದರು.
ಟಿ.ನರಸೀಪುರಕ್ಕೆ ಭೇಟಿ ನೀಡಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದ ಯುವಕರೊಂದಿಗೆ ಚರ್ಚಿಸಿದ ಅವರು, ಪೊಲೀಸ್ ದೌರ್ಜನ್ಯವನ್ನು ಖಂಡಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಕೂಡಲೇ ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಚೌತಿ ಪೊಲೀಸರ ಹಬ್ಬವಾಗಬಾರದು, ಇದು ಜನರ ಹಬ್ಬವಾಗಬೇಕು. ಯಾವುದೇ ನಿಯಮಗಳನ್ನು ಪೊಲೀಸರು ಭಕ್ತರ ಮೇಲೆ ಹೇರಬಾರದು. ಹಿಂದಿನ ಕಾಲದಲ್ಲಿ ನಡೆಯುವಂತೆಯೇ ಈಗಲೂ ಹಬ್ಬದ ಆಚರಣೆ ನಡೆಯಬೇಕು. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಭಕ್ತರಿಗೆ ಬೆದರಿಕೆ ಹಾಕಿದ ಇನ್ಸ್ಪೆಕ್ಟರ್ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಈ ಕುರಿತು ನಾನು ಡಿಜಿಪಿ ಬಳಿ ಚರ್ಚೆ ಮಾಡಿದ್ದೇನೆ. ಎಸ್ಪಿಯಿಂದ ಸಂಧಾನ ಸಭೆ ಕೂಡ ನಡೆದಿದೆ. ಮೂರು ನಾಲ್ಕು ದಿನದಲ್ಲಿ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ನಮಗೆ ಅದು ಬೇಕಿಲ್ಲ. ಜನರ ಮೇಲೆ ಗೂಂಡಾಗಿರಿ ಮಾಡಿದ ಇನ್ಸ್ಪೆಕ್ಟರ್ ಆ ಸ್ಥಾನದಲ್ಲಿ ಇರಬಾರದು ಎಂಬುದು ನಮ್ಮ ಆಗ್ರಹ ಎಂದರು.
ಗಣೇಶ ಹಬ್ಬದಲ್ಲಿ ಸರ್ಕಾರ ಎಲ್ಲ ಕಡೆ ತೊಂದರೆ ನೀಡುತ್ತಿದೆ. ಧ್ವನಿವರ್ಧಕ ಬಳಸಬಾರದು, ಮೆರವಣಿಗೆ ಹೋಗಬಾರದು ಎಂಬಿತ್ಯಾದಿ ನಿಯಮಗಳನ್ನು ಹೇರಲಾಗಿದೆ. ಇನ್ನೂ ಒಂದು ತಿಂಗಳ ಕಾಲ ಗಣೇಶ ಹಬ್ಬದ ಆಚರಣೆ ನಡೆಯಲಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಹತ್ತಿಕ್ಕುತ್ತಿದೆ. ನಾವು ಹೋರಾಟದ ಜೊತೆಗೆ ಪೊಲೀಸರ ಜೊತೆ ಸಂಧಾನ ಸಭೆ ಮಾಡಿದ್ದೇವೆ. ಆದರೆ ಸರ್ಕಾರ ಹಠಮಾರಿತನ ತೋರಿಸಿದೆ. ಆದ್ದರಿಂದ ಪೊಲೀಸರು ನಿಷೇಧಿಸಿದ ಮಸೀದಿ ಇರುವ ಜಾಗದಿಂದಲೇ ನಾವು ಮೆರವಣಿಗೆ ಮಾಡುತ್ತೇವೆ. ನಾವೆಲ್ಲರೂ ನ್ಯಾಯಕ್ಕಾಗಿ ಈ ಮೂಲಕ ಹೋರಾಟ ಮಾಡುತ್ತೇವೆ. ಇಡೀ ಸರ್ಕಾರ ಜನರ ಬದಲಿಗೆ ಒಬ್ಬ ಇನ್ಸ್ಪೆಕ್ಟರ್ ಪರವಾಗಿ ನಿಂತಿರುವುದು ದುರ್ದೈವ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ರಕ್ತದಲ್ಲೇ ಹಿಂದೂ ವಿರೋಧಿ ಗುಣವಿದೆ. ಇಂತಹ ತುಘಲಕ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪೊಲೀಸ್ ಠಾಣೆಗಳು ಗೂಂಡಾ ಠಾಣೆಗಳಾಗಿವೆ ಎಂದರು.
ನಾವು ಪ್ರಜಾಪ್ರಭುತ್ವದ ರೀತಿಯಲ್ಲೇ ಹೋರಾಟ ಮಾಡುತ್ತೇವೆ. ಯಾವುದೇ ಹಿಂದೂಗಳಿಗೆ ತೊಂದರೆಯಾದರೂ ನಾವು ಅಲ್ಲಿಗೆ ಹೋಗಿ ಬೆಂಬಲ ನೀಡುತ್ತೇವೆ. ಗಣೇಶ ಹಬ್ಬದಲ್ಲಿ ಯಾವುದೇ ತೊಂದರೆಯಾಗದಂತೆ ನಾವು ಕಾಪಾಡುತ್ತೇವೆ ಎಂದರು.




