Kannada NewsKarnataka NewsLatest

*ಧೋ ಎಂದು ಸುರಿದ ಮಳೆ: ಕೌಂಪೌಂಡ್ ಕುಸಿದು ಐದು ಜಾನುವಾರು ಸಾವು*

ಪ್ರಗತಿವಾಹಿನಿ ಸುದ್ದಿ:  ದಿಢೀರನೆ ಧೋ ಎಂದು ಸುರಿದ ಮಳೆಯ ಆರ್ಭಟಕ್ಕೆ ಕಾಂಪೌಂಡ್ ಗೋಡೆ ಕುಸಿದುಬಿದ್ದ ಪರಿಣಾಮ ಐದು ಜಾನುವಾರುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಧಾನಿ ಬೆಂಗಳೂರಿನ ದೊಮ್ಮಲೂರು ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ದೊಮ್ಮಲೂರಿನ ಒಂದನೇ ಕ್ರಾಸ್‌ನಲ್ಲಿರುವ ಮಿಲಿಟರಿ ಕಾಂಪೌಂಡ್ ಗೋಡೆ ಮಳೆಯಿಂದಾಗಿ ಸಂಪೂರ್ಣವಾಗಿ ನೆನೆದು ಶಿಥಿಲಗೊಂಡಿತ್ತು. ನಿನ್ನೆ ಸಂಜೆ ವೇಳೆಗೆ ಭಾರೀ ಸದ್ದಿನೊಂದಿಗೆ ಗೋಡೆ ಕುಸಿದುಬಿದ್ದಿದ್ದು, ಆ ಸಮಯದಲ್ಲಿ ಸ್ಥಳದಲ್ಲಿದ್ದ ಹಸುಗಳ ಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ನಾಲ್ಕು ಹಸುಗಳು ಹಾಗೂ ಒಂದು ಕರು ಸೇರಿ ಒಟ್ಟು ಐದು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ.

Home add -Advt

ಸಂಜೆ ವೇಳೆ ಜಾನುವಾರುಗಳ ಹಾಲು ಕರೆಯಲು ತೆರಳಿದ್ದ ಮಾಲೀಕ ಮುನಿರಾಜು ಎಂಬುವರ ಮೇಲೆಯೂ ಗೋಡೆಯ ಬೃಹತ್ ತುಂಡುಗಳು ಬಿದ್ದಿವೆ. ಘಟನೆಯಲ್ಲಿ ಮುನಿರಾಜು ಅವರ ಎರಡೂ ಕಾಲುಗಳು ಮುರಿದಿದ್ದು, ದೇಹಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದೆ. ಘಟನೆ ನಡೆಯುತ್ತಿದ್ದಂತೆ ಓಡಿಬಂದ ಸ್ಥಳೀಯರು ತಕ್ಷಣವೇ ಗಾಯಾಳುವನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗೋಡೆ ಕುಸಿತದಿಂದಾಗಿ ಜೀವನಾಧಾರವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿಡುತ್ತಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಗಾಯಾಳು ಮಾಲೀಕನಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Related Articles

Back to top button