
ಪ್ರಗತಿವಾಹಿನಿ ಸುದ್ದಿ: ಸ್ವಚ್ಛತಾ ಕಾರ್ಯಗಳಿಂದಲೇ ವಿಶ್ವಾದ್ಯಂತ ಹೆಸರುವಾಸಿಯಾಗುರುವ ಮಧ್ಯಪ್ರದೇಶದ ೨೧ ವರ್ಷದ ಯುವಕ ತಬಾಹಿ ಬಿಟ್ಟು ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತಬಾಹಿ ಬಿಟ್ಟು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬನಶಂಕರಿಯ 6ನೇ ಹಂತದಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತ ಸುರಿದಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸುವ “ತುರಹಳ್ಳಿ ಕ್ಲೀನಪ್” ಅಭಿಯಾನದಲ್ಲಿ ಅವರು ಭಾಗವಹಿಸಿದ್ದಾರೆ.
ತಬಾಹಿ ಬಿಟ್ಟು, ಈ ಹಿಂದೆ ಮಧ್ಯಪ್ರದೇಶದ ರಾಜಗರ್ನಲ್ಲಿರುವ ಕಲುಷಿತ ಅಜ್ಞಾನ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಿ ಖ್ಯಾತಿ ಗಳಿಸಿದ್ದರು. ಅವರ ಈ ಕಾರ್ಯವನ್ನು ಮುಖ್ಯಮಂತ್ರಿಗಳೂ ಕೂಡ ಅಭಿನಂದಿಸಿದ್ದರು.
ಸಿಲಿಕಾನ್ ಸಿಟಿ ಬೆಂಗಳುರಿನ ತುರಹಳ್ಳಿ ಅರಣ್ಯದ ಪರಿಸ್ಥಿತಿ ನೋಡಿ ತಮಗೆ ಆಘಾತವಾಯಿತು ಎಂದು ತಬಾಹಿ ಬಿಟ್ಟು ಹೇಳಿದ್ದಾರೆ. ಐಟಿ-ಬಿಟಿ ನಗರದಲ್ಲಿ ಇಷ್ಟೊಂದು ಕಸ ಇರುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದು, ಮನೆಯ ತ್ಯಾಜ್ಯ, ನಿರ್ಮಾಣ ತ್ಯಾಜ್ಯ ಮತ್ತು ಸತ್ತ ಪ್ರಾಣಿಗಳನ್ನು ಸಹ ಇಲ್ಲಿ ಎಸೆಯಲಾಗಿದೆ. ಈ ಅಭಿಯಾನಕ್ಕೆ ಹಿರಿಯ ಪರಿಸರವಾದಿ ಎಲ್ಲಪ್ಪ ರೆಡ್ಡಿ ಚಾಲನೆ ನೀಡಿದ್ದು, ಎರಡು ಖಾಸಗಿ ಕಂಪನಿಗಳು ಆಯೋಜಿಸಿದ್ದವು. 150ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ತಬಾಹಿ ಬಿಟ್ಟು ಸ್ವತಃ ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
