Kannada NewsKarnataka NewsLatestPolitics

*ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ರೋಬೋಟ್‌ಗಳು ಪಾಠ ಕಲಿಸಬಹುದು; ಆದರೆ ಸಂಸ್ಕಾರ, ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಶಿಕ್ಷಕರೇ ಕಲಿಸಬೇಕು
ಪಿರಿಯಾಪಟ್ಟಣ: ಒಬ್ಬ ವೈದ್ಯರು ಒಂದು ಜೀವ ಉಳಿಸಬಹುದು, ಒಬ್ಬ ಎಂಜಿನಿಯರ್ ಒಂದು ಕಟ್ಟಡ ನಿರ್ಮಿಸಬಹುದು. ಆದರೆ ಒಬ್ಬ ಶಿಕ್ಷಕ ಇಡೀ ಸಮಾಜವನ್ನೇ ನಿರ್ಮಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ಇಂಜಿನಿಯರ್, ವೈದ್ಯ, ವಿಜ್ಞಾನಿ, ಕ್ರೀಡಾಪಟು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ರೂಪಿಸುವವರು ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರು ವಂದನಾ ಸಮಾರಂಭ – 2026ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರ ಸೇವೆ, ತ್ಯಾಗ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಭಾವುಕವಾಗಿ ಸ್ಮರಿಸಿದರು.
“ನಮ್ಮ ತಾಯಿಯ ನಂತರ ಜೀವನದ ಮೌಲ್ಯಗಳನ್ನು, ಶಿಕ್ಷಣವನ್ನು ಹಾಗೂ ಬದುಕಿನ ದಾರಿಯನ್ನು ಯಾರಾದರೂ ನಮಗೆ ಕಲಿಸಿಕೊಟ್ಟಿದ್ದರೆ, ಅದು ಶಿಕ್ಷಕರು. ನಾವು ಇಂದು ಯಾವುದೇ ಕ್ಷೇತ್ರದಲ್ಲಿ ಬೆಳೆದಿದ್ದರೂ ಅದರ ಹಿಂದೆ ಒಬ್ಬ ಶಿಕ್ಷಕರ ಪರಿಶ್ರಮ, ಮಾರ್ಗದರ್ಶನ ಮತ್ತು ಆಶೀರ್ವಾದ ಇದ್ದೇ ಇರುತ್ತದೆ” ಎಂದು ಅವರು ಹೇಳಿದರು.

Home add -Advt

ಶಿಕ್ಷಕರ ಕೈಯಲ್ಲಿ ಭವಿಷ್ಯದ ಸಮಾಜ ನಿರ್ಮಾಣ

ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ಪಡೆಯಬೇಕು, ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಕನಸಿನಿಂದ ಶಾಲೆಗೆ ಕಳುಹಿಸುತ್ತಾರೆ. ಆ ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಹೊಣೆ ಶಿಕ್ಷಕರ ಮೇಲಿದೆ ಎಂದು ಹೆಬ್ಬಾಳಕರ್ ಹೇಳಿದರು.


“ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಕರ ಕೈಗೆ ಒಪ್ಪಿಸಿದಾಗ, ಭವಿಷ್ಯದ ಒಂದು ಸಸಿಯನ್ನು ನಿಮ್ಮ ಕೈಗೆ ನೀಡುತ್ತಾರೆ. ನೀವು ಅದಕ್ಕೆ ಜ್ಞಾನವೆಂಬ ನೀರು, ಸಂಸ್ಕಾರವೆಂಬ ಗೊಬ್ಬರ ಹಾಕಿ ಬೆಳೆಸುತ್ತೀರಿ. ಮುಂದೆ ಅದೇ ಮಗು ವೈದ್ಯ, ಎಂಜಿನಿಯರ್, ವಿಜ್ಞಾನಿ, ಕ್ರೀಡಾಪಟು ಅಥವಾ ಯಾವುದೇ ಕ್ಷೇತ್ರದ ಸಾಧಕನಾಗುತ್ತದೆ. ಆ ಸಾಧನೆಯ ಹಿಂದೆ ಶಿಕ್ಷಕರ ಪರಿಶ್ರಮ ಇರುತ್ತದೆ” ಎಂದರು.


ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದಾಗ ಅಥವಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಾಗ ಪೋಷಕರು ಸಂತೋಷಪಡುತ್ತಾರೆ. ಆದರೆ ತಾವು ಕಲಿಸಿದ ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದಾಗ ಶಿಕ್ಷಕರಿಗೆ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.


“ನಿಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಂದು ದಿನ ನಿಮ್ಮ ಮುಂದೆ ಬಂದು, ‘ಮ್ಯಾಡಂ, ನೀವು ನನಗೆ ಇದನ್ನು ಕಲಿಸಿದ್ದರಿಂದಲೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ’ ಎಂದು ಹೇಳಿದಾಗ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದಕ್ಕಿಂತ ದೊಡ್ಡ ಗೌರವ ಶಿಕ್ಷಕರಿಗೆ ಮತ್ತೊಂದಿಲ್ಲ” ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಾವಿತ್ರಿಬಾಯಿ ಫುಲೆ ಅವರ ಧೈರ್ಯ ಸ್ಮರಿಸಿದ ಹೆಬ್ಬಾಳಕರ್

ಮಹಿಳೆಯರಿಗೆ ಶಿಕ್ಷಣ ನೀಡುವ ವಿಚಾರದಲ್ಲಿ ಭಾರತದಲ್ಲಿ ಆರಂಭಿಕ ದಿನಗಳಲ್ಲಿ ಎದುರಾದ ಪ್ರತಿರೋಧವನ್ನು ಸ್ಮರಿಸಿದ ಅವರು, ಸಾವಿತ್ರಿಬಾಯಿ ಫುಲೆ ಅವರ ಸೇವೆ ಮತ್ತು ಧೈರ್ಯವನ್ನು ಕೊಂಡಾಡಿದರು.


ಮಹಿಳೆಯರಿಗೆ ಶಿಕ್ಷಣ ನೀಡಲು ಮುಂದಾದ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಅವರು ತೀವ್ರ ಅವಮಾನ ಮತ್ತು ವಿರೋಧವನ್ನು ಎದುರಿಸಬೇಕಾಯಿತು. ಶಾಲೆಗೆ ತೆರಳುವ ಸಂದರ್ಭದಲ್ಲಿ ಅವರ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದರೂ ಅವರು ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಇಡಲಿಲ್ಲ ಎಂದು ಹೆಬ್ಬಾಳಕರ್ ಹೇಳಿದರು.
“ಆ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಧೈರ್ಯ ಮಾಡಿರಲಿಲ್ಲ ಎಂದಿದ್ದರೆ, ಇಂದು ಮಹಿಳೆಯರು ಶಿಕ್ಷಣ ಪಡೆದು ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿತ್ತೇ? ಅಂದಿನ ವಿರೋಧದ ನಡುವೆಯೂ ಅವರು ಮಹಿಳೆಯರಿಗೆ ಶಿಕ್ಷಣ ನೀಡುವ ಕಾರ್ಯ ಮುಂದುವರಿಸಿದರು. ಅವರಂತಹವರ ಧೈರ್ಯದಿಂದಲೇ ಇಂದು ನಾವು ಈ ಹಂತಕ್ಕೆ ಬಂದಿದ್ದೇವೆ” ಎಂದು ಹೇಳಿದರು.


ಅದೇ ರೀತಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗದಿಂದಲೇ ಇಂದು ನಾವು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ಹಿಂದಿನ ತಲೆಮಾರುಗಳು ಕಷ್ಟದ ಸಂದರ್ಭದಲ್ಲೂ ಧೈರ್ಯ ತೋರಿದ ಕಾರಣದಿಂದಲೇ ಮುಂದಿನ ತಲೆಮಾರುಗಳಿಗೆ ಉತ್ತಮ ಅವಕಾಶಗಳು ದೊರೆತಿವೆ ಎಂದು ಅವರು ಹೇಳಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರನ್ನು ಸ್ಮರಿಸಿ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯನ್ನು ವಿವರಿಸಿದ ಹೆಬ್ಬಾಳಕರ್, ಭಾರತದ ಮಾಜಿ ರಾಷ್ಟ್ರಪತಿ ಹಾಗೂ ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆಯನ್ನು ಸ್ಮರಿಸಿದರು.


ಕಷ್ಟದ ಕಾಲದಲ್ಲೂ ಶಿಕ್ಷಣ ಪಡೆದು ಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ ಡಾ. ರಾಧಾಕೃಷ್ಣನ್ ಅವರು ದೇಶಕ್ಕೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವ ಮೂಲಕ ದೇಶ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಿದೆ ಎಂದರು.
“ಮಹಾತ್ಮರು, ಪುಣ್ಯಪುರುಷರು ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಪರಂಪರೆ ನಮ್ಮ ದೇಶದಲ್ಲಿದೆ. ಅದೇ ರೀತಿ ಶಿಕ್ಷಕರಿಗೂ ಗೌರವ ಸಲ್ಲಿಸುವ ದಿನವೇ ಶಿಕ್ಷಕರ ದಿನಾಚರಣೆ” ಎಂದು ಹೇಳಿದರು.

ರೋಬೋಟ್ ಯುಗದಲ್ಲೂ ಶಿಕ್ಷಕರ ಸ್ಥಾನ ಅನನ್ಯ

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ರೋಬೋಟ್‌ಗಳು ಹಾಗೂ ಆಧುನಿಕ ತಂತ್ರಜ್ಞಾನಗಳ ಮೂಲಕ ಮಕ್ಕಳಿಗೆ ಕಲಿಸುವ ಕಾಲವೂ ಬಂದಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಇನ್ನಷ್ಟು ಮುಂದುವರಿಯಲಿದೆ. ಆದರೆ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರವನ್ನು ಯಾವುದೇ ತಂತ್ರಜ್ಞಾನ ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ ಎಂದು ಹೆಬ್ಬಾಳಕರ್ ಹೇಳಿದರು.


“ರೋಬೋಟ್ ಪಾಠ ಕಲಿಸಬಹುದು. ಆದರೆ ಪ್ರೀತಿ, ಸಂಸ್ಕೃತಿ, ನೈತಿಕ ಮೌಲ್ಯ, ಧೈರ್ಯ, ಸಾಹಸ ಮತ್ತು ಮಾನವೀಯತೆಯನ್ನು ಕಲಿಸಲು ಶಿಕ್ಷಕರೇ ಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಶಿಕ್ಷಕರ ಸ್ಥಾನವನ್ನು ಅದು ತುಂಬಲು ಸಾಧ್ಯವಿಲ್ಲ” ಎಂದರು.


ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಲಿ
ಹೆಣ್ಣುಮಕ್ಕಳಿಗೆ ಶಿಕ್ಷಣ, ಅವಕಾಶ ಮತ್ತು ಸಮಾನ ಗೌರವ ದೊರೆಯಬೇಕು. ಅವರು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದರು.


“ನಮ್ಮ ಹೆಣ್ಣುಮಕ್ಕಳು ಮುಂದೆ ಬರಬೇಕು. ಶಿಕ್ಷಣ ಪಡೆದು ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಳ್ಳಬೇಕು. ಹೆಣ್ಣುಮಕ್ಕಳು ಯಾರಿಗಿಂತಲೂ ಕಡಿಮೆಯಲ್ಲ ಎಂಬ ಆತ್ಮವಿಶ್ವಾಸವನ್ನು ನಾವು ಅವರಲ್ಲಿ ಬೆಳೆಸಬೇಕು” ಎಂದು ಹೇಳಿದರು.


ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಮಾಜದ ಪ್ರತಿಯೊಬ್ಬರೂ ಅವರ ಪರವಾಗಿ ನಿಲ್ಲಬೇಕು. ಮಹಿಳೆಯರ ಗೌರವ ಮತ್ತು ಸ್ವಾಭಿಮಾನವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.

ಶಿಕ್ಷಕರ ಶಿಸ್ತು ಮತ್ತು ತ್ಯಾಗಕ್ಕೆ ಗೌರವ

ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದ ಹೆಬ್ಬಾಳಕರ್, ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸಲು ತೋರಿಸುತ್ತಿದ್ದ ಕಾಳಜಿಯನ್ನು ಸ್ಮರಿಸಿದರು.
ಹಿಂದೆ ಪೋಷಕರ ಸಭೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಗದರಿಸಿದರೂ, ಶಿಸ್ತಿನಿಂದ ಬೆಳೆಸಿದರೂ ಪೋಷಕರು ಅದನ್ನು ಶಿಕ್ಷಕರ ಮೇಲಿನ ಕಾಳಜಿಯಾಗಿ ನೋಡುತ್ತಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ತಮ್ಮ ವೈಯಕ್ತಿಕ ಬದುಕಿನ ಹಲವು ಸವಾಲುಗಳ ನಡುವೆಯೂ ಶ್ರಮಿಸುತ್ತಾರೆ ಎಂದು ಅವರು ಹೇಳಿದರು.

ಶಿಕ್ಷಕರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ

ಕರ್ತವ್ಯದ ಜತೆಗೆ ಶಿಕ್ಷಕರು ತಮ್ಮ ಆರೋಗ್ಯ, ಸಂತೋಷ ಮತ್ತು ವೈಯಕ್ತಿಕ ಬದುಕಿಗೂ ಸಮಯ ನೀಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಸಲಹೆ ನೀಡಿದರು.
“ಜೀವನವನ್ನು ಕೇವಲ ಕರ್ತವ್ಯಗಳಲ್ಲೇ ಕಳೆಯಬಾರದು. ಯೋಗ, ವ್ಯಾಯಾಮ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಂಡರೆ ಮಾತ್ರ ನಮ್ಮ ಮನಸ್ಸನ್ನೂ ಸಂತೋಷವಾಗಿಟ್ಟುಕೊಳ್ಳಲು ಸಾಧ್ಯ” ಎಂದರು.


ವಯಸ್ಸು ಹೆಚ್ಚಾದರೂ ಜೀವನೋತ್ಸಾಹ ಕಡಿಮೆಯಾಗಬಾರದು. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಚಟುವಟಿಕೆಗಳಲ್ಲಿ ಭಾ

ಗವಹಿಸಿ ಜೀವನವನ್ನು ಸಂತೋಷದಿಂದ ಅನುಭವಿಸಬೇಕು ಎಂದು ಅವರು ಕರೆ ನೀಡಿದರು.
ಶಿಕ್ಷಕರ ದಿನಾಚರಣೆ ಶಿಕ್ಷಕರ ಸೇವೆಯನ್ನು ನೆನಪಿಸಿಕೊಳ್ಳುವ ದಿನ ಮಾತ್ರವಲ್ಲ, ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಗೌರವಿಸುವ ದಿನವೂ ಹೌದು. ಪ್ರತಿಯೊಬ್ಬರ ಬದುಕಿನಲ್ಲೂ ಒಬ್ಬ ಶಿಕ್ಷಕರ ಋಣ ಇದ್ದೇ ಇರುತ್ತದೆ. ಆ ಋಣವನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ. ವೆಂಕಟೇಶ್, ಶ್ರೀ ಗಣೇಶ್ (ಎಚ್.ಡಿ), ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ರಾಜಣ್ಣ, ಕೆಪಿಸಿಸಿ ಸದಸ್ಯರಾದ ಅನಿಲಕುಮಾರ್, ಆಯತನಹಳ್ಳಿ ಮಹಾದೇವ್, ಇ.ಪಿ.ಲೋಕೇಶ್, ಬ್ಲಾಕ್ ಅಧ್ಯಕ್ಷರಾದ ರಹಮದಜಾನ್ ಬಾಬು, ನೌಕರರ ಸಂಘದ ಅಧ್ಯಕ್ಷರಾದ ಕೆ.ಕೃಷ್ಣಗೌಡ ತಹಶಿಲ್ದಾರ್ ನಿಸರ್ಗ ಪ್ರಿಯ ಜೆ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ್ ಡಿ.ಎನ್, ಕಾರ್ಯ ನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಶಿಕ್ಷಣ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button