
ಪ್ರಗತಿವಾಹಿನಿ ಸುದ್ದಿ: ಮೈಸೂರು ಜಿಲ್ಲೆಯ ಟಿ.ನರಸೀಪುರ ಗಣೇಶೋತ್ಸವ ವಿವಾದ ಹಾಗೂ ಆನಂತರದ ಬಿಜೆಪಿ ನಾಯಕರ ಪ್ರತಿಭಟನೆ ಬೆನ್ನಲ್ಲೇ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ಹಾಗೂ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪೊಲಿಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಗುಂಪುಗಳು ಹಾಗೂ ಜಾತಿಗಳ ನಡುವೆ ದ್ವೇಷಕ್ಕೆ ಉತ್ತೇಜನ, ಧಾರ್ಮಿಕ ನಂಬಿಕೆಗಳಿಗೆ ಅವಮಾನ, ಪ್ರಚೋದನಕಾರಿ ಭಾಷಣ ಮಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಮಸೀದಿ ರಸ್ತೆಗಳಲ್ಲಿ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಪೊಲೀಸರು ಸೂಚಿಸಿದ ಮಾರ್ಗದಲ್ಲೇ ಹೋಗಬೇಕು. ಇಲ್ಲವಾದಲ್ಲಿ ಗ್ರಹಚಾರ ಬಿಡಿಸುತ್ತೇನೆ. ನಾವು ಮಾತನಾಡಲ್ಲ, ಮಾಡಿ ತೋರಿಸುತ್ತೇವ್ ಎ ಎಂದು ಗಣೇಶ ಪ್ರತಿಷ್ಠಾಪನೆ ಸಮಿತಿ ಸದಸ್ಯರನ್ನು ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದರು.
ಇನ್ಸ್ ಪೆಕ್ಟರ್ ಹೇಳಿಕೆ ಖಂಡಿಸಿ ಅವರ ಅಮಾನತಿಗೆ ಆಗ್ರಹಿಸಿ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರು ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಇನ್ಸ್ ಪೆಕ್ಟರ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಬೃಹತ್ ಶೋಭಾಯಾತ್ರೆಯನ್ನು ನಡೆಸಲಾಗಿತ್ತು. ಈ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.



