*ವಂದೇ ಮಾತರಂ ನಾವು ಪೂರ್ಣ ಗೀತೆ ಹಾಡುತ್ತೇವೆ; ತಾಕತ್ತಿದ್ದರೆ ತಡೆಯಿರಿ: ಸರ್ಕಾರಕ್ಕೆ ಸವಾಲು ಹಾಕಿದ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ವಿಧಾನಮಂಡಲ ವಿಶೇಷ ಅಧಿವೇಶನ ಇಂದಿನಿಂದ ಮೂರು ದಿನಗಳಕಾಲ ನಡೆಯಲಿದ್ದು, ಸದನದ ಆರಂಭದಲ್ಲೇ ವಂದೇ ಮಾತರಂ ವಿಚಾರವಾಗಿ ಗದ್ದಲ ಕೋಲಾಹಲ ನಡೆಯುವ ಸಾಧ್ಯತೆ ದಟ್ಟವಾಗಿದೆ.
ವಿಧಾನಸಭೆ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಲು ಸರ್ಕಾರ ಆದೇಶಿಸಿದೆ. ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಪೂರ್ತಿ ಹಾಡು ಹಾಡುತ್ತೇವೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರೊಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ನಾವು ಸದನದಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡೇ ಹಾಡುತ್ತೇವೆ. ತಾಕತ್ತಿದ್ದರೆ ತಡೆಯಿರಿ, ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ನಮ್ಮ ರಕ್ತದ ಕಣ ಕಣದಲ್ಲೂ ವಂದೆ ಮಾತರಂ ಗೀತೆ ಇದೆ. ಡಿ.ಕೆಶಿವಕುಮಾರ್ ಅವರಂತಹ ನೂರು ಜನ ಡಿ.ಕೆ ಶಿವಕುಮಾರ್ ಬಂದರೂ ನಾವು ಹಾಡೇ ಹಾಡ್ತೀವಿ. ಅದ್ಯಾರೋ ಮಂತ್ರಿ ಕೇಸ್ ಹಾಕುತ್ತೇವೆ ಎಂದಿದ್ದಾರೆ. ನಾನೇ ಪೂರ್ತಿಯಾಗಿ ವಂದೇ ಮಾತರಂ ಹಾಡ್ತೀನಿ. ಕೇಸು ಹಾಕಿ ನೋಡೋಣ ಎಂದಿದ್ದಾರೆ.
ಮಸೀದಿಗಳಿಂದ ದಿನ ಬೆಳಗ್ಗೆ ಅಲ್ಲಾಹು ಅಕ್ಬರ್ ಅಂತ ಕೂಗ್ತಾನೆ ಇರ್ತಾರೆ. ಅಲ್ಲಾ ಒಬ್ಬನೇ ದೇವರು ಅಂತ ನಾವು ಕೇಳಿಸಿಕೊಳ್ಳಬೇಕು. ನಾವು ಮಾ ದುರ್ಗೆ ಅಂತ ಹೇಳಿದ್ರೆ ಕಾಂಗ್ರೆಸ್ನವರಿಗೆ ಕೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಕಿಡಿಕಾರಿದ್ದಾರೆ.



