CrimeKannada NewsKarnataka NewsLatestTravel

*ಬಸ್‌ಗೆ ಲಾರಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಾವೇರಿ ನಗರದ ಹೊರವಲಯದ ಹೊಸರಿತ್ತಿ ಗ್ರಾಮದ ಸಮೀಪ ನಡೆದಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಹೊಸರಿತ್ತಿ ಗ್ರಾಮದ ಬಳಿ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರು ಗಾಯಗೊಂಡಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿ ಬಸ್‌ನಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ.

ಗಾಯಾಳುಗಳನ್ನು ಕೂಡಲೇ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತದ ಹಿನ್ನೆಲೆಯಲ್ಲಿ ಹೊಸರಿತ್ತಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗಿ, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 

ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಲಾರಿ ಹಾಗೂ ಬಸ್ ಚಾಲಕರ ತಪ್ಪು ಯಾರದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button