Kannada NewsKarnataka NewsLatest

*94 ದಿನಗಳಿಂದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗ್ತಿದೆ*: *ಕ್ಲೌಡ್‌ನೈನ್ ಆಸ್ಪತ್ರೆ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಒಂದೂವರೆ ವರ್ಷದ ಮಗು ಕೋಮಾಗೆ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೌಡ್‌ನೈನ್ ಆಸ್ಪತ್ರೆ ಇದೀಗ ಪ್ರತಿಕ್ರಿಯೆ ನೀಡಿದೆ. ವೈದ್ಯರ ನಿರ್ಲಕ್ಷ್ಯದ ಆರೋಪಗಳನ್ನು ಆಸ್ಪತ್ರೆ ತಳ್ಳಿಹಾಕಿದ್ದು, ಕಳೆದ 94 ದಿನಗಳಿಂದ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಹಿಂದಿನ ಸ್ಥಿತಿಗೆ ಹೋಲಿಸಿದರೆ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಆಸ್ಪತ್ರೆಯ ಮೆಡಿಕಲ್ ಹೆಡ್ ನಾಗ ನಿಶ್ಚಲ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳಲ್ಲಿ ಬೇಬಿ ಶಯಾನಾ ಪ್ರಕರಣದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ವಾಸ್ತವಾಂಶ ತಿಳಿಸುವ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ಆಸ್ಪತ್ರೆಯ ರೀಜಿನಲ್ ಡೈರೆಕ್ಟರ್ ಶ್ರೀನಾಥ್ ಹೇಳಿದರು.

ನಂತರ ಮಾತನಾಡಿದ ಮೆಡಿಕಲ್ ಹೆಡ್ ನಾಗ ನಿಶ್ಚಲ್, ಮಗುವಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಸುಳ್ಳು. ಆರಂಭದಲ್ಲಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ವೆಂಟಿಲೇಟರ್‌ನಲ್ಲಿತ್ತು. ಆದರೆ ಇದೀಗ ವೆಂಟಿಲೇಟರ್‌ನಿಂದ ಹೊರಬಂದಿದ್ದು, ಆಕ್ಸಿಜನ್ ಸಹಾಯವಿಲ್ಲದೆ ಉಸಿರಾಡುತ್ತಿದೆ. ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರೂ, ನರವೈಜ್ಞಾನಿಕ ಚೇತರಿಕೆಗೆ ಇನ್ನೂ ಸಮಯ ಬೇಕಾಗಬಹುದು ಎಂದು ತಿಳಿಸಿದರು.

ಮಗುವಿಗೆ ಅನಸ್ತೇಶಿಯಾ ನೀಡಿದ ವೈದ್ಯರಿಗೆ ಅನುಭವವಿಲ್ಲ ಎಂಬ ಆರೋಪವನ್ನೂ ಆಸ್ಪತ್ರೆ ತಳ್ಳಿಹಾಕಿದೆ. 14 ವರ್ಷಗಳ ಅನುಭವ ಹೊಂದಿರುವ ವೈದ್ಯರೇ ಅನಸ್ತೇಶಿಯಾ ನೀಡಿದ್ದರು ಎಂದು ಸ್ಪಷ್ಟಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ತಜ್ಞರ ವರದಿಯ ಬಗ್ಗೆಯೂ ಆಸ್ಪತ್ರೆ ಅಸಮಾಧಾನ ವ್ಯಕ್ತಪಡಿಸಿದೆ. ತಜ್ಞರು ತಮ್ಮಿಂದ ಪಡೆದ ಸಂಪೂರ್ಣ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದು ನಾಗ ನಿಶ್ಚಲ್ ಆರೋಪಿಸಿದರು. ಆಸ್ಪತ್ರೆ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದರೂ, ತಮ್ಮ ವಾದಗಳು ವರದಿಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಿದರು.

ಇನ್ನು, ಇದು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿದ ಘಟನೆ ಅಲ್ಲ. ಅನಸ್ತೇಶಿಯಾ ವೇಳೆ ಉಂಟಾದ ತೊಂದರೆ ಹಾಗೂ ಆಸ್ಪಿರೇಷನ್‌ನಿಂದ ಸಮಸ್ಯೆ ಎದುರಾಗಿದೆ ಎಂಬುದು ಆಸ್ಪತ್ರೆಯ ಸ್ಪಷ್ಟನೆಯಾಗಿದೆ.

ಇದೇ ವೇಳೆ, ಸುಮಾರು 70ರಿಂದ 80 ಮಂದಿ ಆಸ್ಪತ್ರೆಗೆ ಬಂದು ಗಲಾಟೆ ನಡೆಸಿದ್ದಾರೆ. ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಭದ್ರತೆಗಾಗಿ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದೆ. ಗಲಾಟೆಯಿಂದ ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳಿಗೂ ತೊಂದರೆಯಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

Related Articles

Back to top button