*ದೀಪಾವಳಿ ಖರೀದಿಗೆ ಮುಗಿಬಿದ್ದ ಜನ*: *ಬೆಳಗಿನ ಜಾವ 3 ಗಂಟೆಯಿಂದಲೇ ಮಾರುಕಟ್ಟೆ ಫುಲ್ ರಶ್*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬೆಂಗಳೂರಿನ ಮಾರುಕಟ್ಟೆಗಳು ಕಳೆಗಟ್ಟಿವೆ. ಹಬ್ಬದ ಸಿದ್ಧತೆಗಾಗಿ ಜನರು ಬೆಳಗ್ಗೆಯೇ ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಬಣ್ಣಬಣ್ಣದ ಹೂವುಗಳ ರಾಶಿ, ಹಣ್ಣುಗಳ ಅಂಗಡಿಗಳು ಮತ್ತು ಗ್ರಾಹಕರ ಗದ್ದಲದಿಂದ ಮಾರುಕಟ್ಟೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬೆಳಗಿನ ಜಾವ 3 ಗಂಟೆಯಿಂದಲೇ ಜನರು ಖರೀದಿಗಾಗಿ ಮಾರುಕಟ್ಟೆಗೆ ಆಗಮಿಸಿದ್ದು, ವ್ಯಾಪಾರ ವಹಿವಾಟು ಕೂಡ ಜೋರಾಗಿದೆ. ಹಬ್ಬದ ಖರೀದಿಯ ಭರಾಟೆ ಎಷ್ಟಿದೆ ಎಂದರೆ, ಕೆಲವೆಡೆ ಹೆಜ್ಜೆ ಇಡಲೂ ಜಾಗವಿಲ್ಲದಷ್ಟು ಜನಸಂದಣಿ ಕಂಡುಬಂದಿದೆ.
ದೀಪಾವಳಿಯ ಪೂಜೆ ಮತ್ತು ಸಂಭ್ರಮಾಚರಣೆಗೆ ಬೇಕಾದ ಹೂವು, ಹಣ್ಣು, ಅಲಂಕಾರಿಕ ವಸ್ತುಗಳು ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಜನರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ. ಕುಟುಂಬ ಸಮೇತರಾಗಿ ಬಂದಿರುವ ಗ್ರಾಹಕರು ಹಬ್ಬದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಭರ್ಜರಿ ಶಾಪಿಂಗ್ ಮಾಡ್ತಿದ್ದಾರೆ.
ಮಾರುಕಟ್ಟೆಯ ಎಲ್ಲೆಡೆ ಬಣ್ಣಬಣ್ಣದ ಹೂವುಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಹಬ್ಬದ ಖರೀದಿಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ವ್ಯಾಪಾರಿಗಳಿಗೆ ಉತ್ತಮ ವಹಿವಾಟಿನ ನಿರೀಕ್ಷೆ ಮೂಡಿದೆ. ಒಟ್ಟಿನಲ್ಲಿ, ದೀಪಗಳ ಹಬ್ಬದ ಸಂಭ್ರಮ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಈಗಾಗಲೇ ಮನೆಮಾಡಿದೆ.




