Kannada NewsKarnataka NewsLatestPolitics

*ಮಹಿಳೆಯರ ಖಾತೆಗೆ ಬರಲಿದೆಯಾ 50 ಸಾವಿರ ರೂ*:  *ಚುನಾವಣೆಗೂ ಮುನ್ನ ಭರ್ಜರಿ ಗಿಫ್ಟ್ ಪ್ಲ್ಯಾನ್!*

ಪ್ರಗತಿವಾಹಿನಿ ಸುದ್ದಿ: ಮಹಿಳೆಯರಿಗೆ ಬರೋಬ್ಬರಿ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವ ಹೊಸ ಯೋಜನೆಯೊಂದು ಸಿದ್ಧವಾಗುತ್ತಿದೆ. ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈಗಾಗಲೇ ಮಹಿಳೆಯರಿಗೆ 40 ಸಾವಿರ ರೂಪಾಯಿ ನೀಡುವ ಭರವಸೆ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಅದಕ್ಕಿಂತ ಹೆಚ್ಚುವರಿ 10 ಸಾವಿರ ರೂಪಾಯಿ ಸೇರಿಸಿ ಒಟ್ಟು 50 ಸಾವಿರ ರೂಪಾಯಿ ನೀಡುವ ಚಿಂತನೆ ನಡೆದಿದೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಮತದಾರರನ್ನು ಸೆಳೆಯಲು ಈ ಯೋಜನೆ ಮಹತ್ವ ಪಡೆದುಕೊಂಡಿದೆ. ಹಣವನ್ನು ಒಮ್ಮೆಲೇ ನೀಡಬೇಕೇ ಅಥವಾ ಈಗಿರುವ ಕಲ್ಯಾಣ ಯೋಜನೆಗಳ ಮೂಲಕ ವಿತರಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪ್ರಸ್ತಾವನೆ ಉತ್ತರ ಪ್ರದೇಶದಲ್ಲಿ ಸಿದ್ಧವಾಗುತ್ತಿದೆ.

ಇನ್ನು ಈ ಯೋಜನೆಯ ಬಗ್ಗೆ ಚಿಂತನೆ ನಡೆಸುತ್ತಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ‘ಸ್ತ್ರೀ ಸಮ್ಮಾನ್-ಸಮೃದ್ಧಿ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ 40 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸರ್ಕಾರ 10 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಸೇರಿಸಿ 50 ಸಾವಿರ ರೂಪಾಯಿ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆಯೇ ಯೋಗಿ ಆದಿತ್ಯನಾಥ್ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಆಕರ್ಷಕ ಪ್ಯಾಕೇಜ್ ಘೋಷಿಸುವ ಸುಳಿವು ನೀಡಿದ್ದರು. ಆದರೆ ಆಗ ನೆರವಿನ ಮೊತ್ತ ಅಥವಾ ಯೋಜನೆಯ ಅನುಷ್ಠಾನದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಇದೀಗ 50 ಸಾವಿರ ರೂಪಾಯಿವರೆಗಿನ ನೆರವಿನ ಪ್ರಸ್ತಾವನೆ ಉನ್ನತ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಹಣ ತಲುಪಿಸುವ ಆಯ್ಕೆಗಳೇನು?

ಸರ್ಕಾರದ ಮುಂದಿರುವ ಪ್ರಮುಖ ಆಯ್ಕೆಗಳಲ್ಲಿ ಮೊದಲನೆಯದು, ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಅಂದರೆ ಡಿಬಿಟಿ ಮೂಲಕ ಹಣ ಪಾವತಿಸುವುದು. ಎರಡನೆಯದಾಗಿ, ಈಗಾಗಲೇ ಜಾರಿಯಲ್ಲಿರುವ ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ, ನಿರಾಶ್ರಿತ ಮಹಿಳಾ ಪಿಂಚಣಿ ಯೋಜನೆ ಅಥವಾ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಗಳ ಮೂಲಕ ನೆರವು ತಲುಪಿಸುವ ಚಿಂತನೆಯೂ ಇದೆ. ಆದರೆ ಯೋಜನೆಯ ಆರ್ಥಿಕ ಹೊರೆ, ಫಲಾನುಭವಿಗಳ ಆಯ್ಕೆ ಮತ್ತು ಅನುಷ್ಠಾನದ ಕಾರ್ಯಸಾಧ್ಯತೆ ಕುರಿತು ಇನ್ನೂ ಅಧ್ಯಯನ ನಡೆಯುತ್ತಿದೆ ಎನ್ನಲಾಗಿದೆ. ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ 50 ಸಾವಿರ ರೂಪಾಯಿ ನೆರವು ಘೋಷಣೆಯಾಗುತ್ತದೆಯೇ, ಯಾವ ವರ್ಗದ ಮಹಿಳೆಯರಿಗೆ ಸಿಗಲಿದೆ ಎಂಬುದರ ಬಗ್ಗೆ ಅಧಿಕೃತ ಸ್ಪಷ್ಟನೆಗಾಗಿ ಕಾಯಬೇಕಿದೆ.

Related Articles

Back to top button