*ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಂಜ*: *ಈ ಬಾರಿ ಯಾರಿಗೆಲ್ಲಾ ಪಟಾಕಿ ಸಿಡಿಸ್ತಾರೆ?*

ಪ್ರಗತಿವಾಹಿನಿ ಸುದ್ದಿ: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಸಿಕ್ಕಿದೆ. ಕಳೆದ ಬಾರಿ ತಮ್ಮ ವರ್ತನೆಯಿಂದಾಗಿ ಮನೆಯಿಂದ ಹೊರಹೋಗಿದ್ದ ಮಾಡರ್ನ್ ಕವಿ ಮಂಜ ಮತ್ತೆ ಬಿಗ್‌ಬಾಸ್ ಮನೆಗೆ ಮರಳುತ್ತಿದ್ದಾರೆ. ಮಂಜನನ್ನು ಹೊರಗೆ ಕಳುಹಿಸಿದ್ದ ಬಿಗ್‌ಬಾಸ್ ಇದೀಗ ಮತ್ತೊಮ್ಮೆ ಮನೆಯೊಳಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಂಜನ ರೀ ಎಂಟ್ರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ ಈ ಬಾರಿ ಮಂಜ ತಮ್ಮ ಹಳೆಯ ವರ್ತನೆ ಬದಲಿಸಿಕೊಳ್ಳುತ್ತಾರಾ ಅಥವಾ ಮತ್ತೆ ಮನೆಯಲ್ಲಿ ಗದ್ದಲ ಸೃಷ್ಟಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ನವೆಂಬರ್ 8ರಂದು ಪ್ರಸಾರವಾದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಮಂಜನನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ‘ದೀಪಾವಳಿಗೆ ಬರೀ ಸಿಹಿ ಮಾತ್ರವಲ್ಲ, ಸ್ವಲ್ಪ ಖಾರವನ್ನೂ ಮನೆಗೆ ಕಳಿಸುತ್ತಿದ್ದೇವೆ’ ಎಂದು ಹೇಳುವ ಮೂಲಕ ಮಂಜನ ರೀ ಎಂಟ್ರಿಯ ಸುಳಿವು ನೀಡಿದ್ದಾರೆ.
ಮತ್ತೆ ಮನೆಯೊಳಗೆ ಹೋಗುವ ಮುನ್ನ ಸುದೀಪ್ ಎದುರು ಮಾತನಾಡಿದ ಮಂಜ, ಕಳೆದ ಬಾರಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ ಒಳಗೆ ಹೋಗುವ ಮುನ್ನ ‘ಮನೆಯಲ್ಲಿ ಎಲ್ಲರಿಗೂ ಪಟಾಕಿ ಇಡುತ್ತೀನಿ’ ಎಂದು ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮಂಜನನ್ನು ಹೊರಗೆ ಕಳಿಸಿದ್ದೇಕೆ?
ಮಂಜ ‘ಅಗ್ನಿಪರೀಕ್ಷೆ’ ಮೂಲಕ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದರು. ಆದರೆ ಮನೆಯೊಳಗೆ ಸಹ ಸ್ಪರ್ಧಿಗಳೊಂದಿಗೆ ತೀವ್ರ ವಾಗ್ವಾದ, ಕೆಟ್ಟ ಭಾಷೆಯ ಬಳಕೆ ಮತ್ತು ವೈಯಕ್ತಿಕ ಟೀಕೆಗಳಿಂದ ವಿವಾದಕ್ಕೆ ಸಿಲುಕಿದ್ದರು. ಸಹ ಸ್ಪರ್ಧಿಗಳ ಕುಟುಂಬದವರ ಬಗ್ಗೆಯೂ ಆಕ್ಷೇಪಾರ್ಹವಾಗಿ ಮಾತನಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಮಹಿಳಾ ಸ್ಪರ್ಧಿಗಳ ಬಗ್ಗೆಯೂ ಕೀಳಾಗಿ ಮಾತನಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಬಿಗ್‌ಬಾಸ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು.
ಮಂಜನನ್ನು ಹೊರಗೆ ಕಳುಹಿಸಿದ ನಿರ್ಧಾರದ ಬಗ್ಗೆ ಸುದೀಪ್ ಕೂಡ ಅಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಟ್ಟ ಭಾಷೆ ಬಳಕೆಯ ಕಾರಣಕ್ಕೆ ಹೊರಗೆ ಕಳುಹಿಸುವುದಾದರೆ ಇತರರ ಮೇಲೂ ಅದೇ ಕ್ರಮ ಕೈಗೊಳ್ಳಬೇಕಿತ್ತು. ಇದು ತಮ್ಮ ನಿರ್ಧಾರವಲ್ಲ, ಬಿಗ್‌ಬಾಸ್ ನಿರ್ಧಾರ ಎಂದು ಹೇಳಿದ್ದರು. ಮಂಜನನ್ನು ಬೀಳ್ಕೊಡುವಾಗ ‘ನೀನು ನನ್ನ ತಮ್ಮನಂತೆ’ ಎಂದು ಬೆಂಬಲವನ್ನೂ ಸೂಚಿಸಿದ್ದರು.
ಇದೀಗ ಖುದ್ದು ಸುದೀಪ್ ಅವರೇ ಮಂಜನನ್ನು ಸ್ವಾಗತಿಸಿ ಮತ್ತೆ ಮನೆಯೊಳಗೆ ಕಳುಹಿಸುತ್ತಿದ್ದಾರೆ. ಭಾನುವಾರದ ಸಂಚಿಕೆಯಿಂದ ಮಂಜ ಆಟಕ್ಕೆ ಮರಳಲಿದ್ದಾರೆ. ಈ ಬಾರಿ ಅವರ ಆಟದ ಶೈಲಿ ಹೇಗಿರಲಿದೆ? ಹಳೆಯ ವಿವಾದಗಳು ಮತ್ತೆ ಮರುಕಳಿಸುತ್ತವೆಯೇ? ಅಥವಾ ಬದಲಾಗಿರುವ ಮಂಜನನ್ನು ನೋಡಬಹುದೇ? ಎಂಬುದನ್ನು ಕಾದು ನೋಡಬೇಕಿದೆ.




