CrimeKannada NewsKarnataka NewsLatest

*12 ವರ್ಷದ ಬಾಲಕಿ ಮೇಲೆ ಅತ್ಯಾಚಾರ*: *ಆರೋಪಿ ಮನೆ ಧ್ವಂಸಗೊಳಿಸಿದ ಗ್ರಾಮಸ್ಥರು*

ಪ್ರಗತಿವಾಹಿನಿ ಸುದ್ದಿ: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾದ ಆರೋಪಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿ ಗರ್ಭಿಣಿಯಾಗಿರುವುದು ತಿಳಿಯುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಷಯ ತಿಳಿದ ಗ್ರಾಮಸ್ಥರು ಆತನ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಈ ಘಟನೆ ಇದೀಗ ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ 65 ವರ್ಷದ ಇಸ್ಮಾಯಿಲ್ ಹುಲಗೂರು ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಘಟನೆ ತಿಳಿದ ಗ್ರಾಮಸ್ಥರು ಆಕ್ರೋಶಗೊಂಡು ಆರೋಪಿಯ ಮನೆ ಧ್ವಂಸಗೊಳಿಸಿದ್ದಾರೆ.

ಘಟನೆ ಹಿನ್ನೆಲೆ

ಬಾಲಕಿ ಮತ್ತು ಆರೋಪಿ ಒಂದೇ ಊರಿನವರಾಗಿದ್ದು, ಆರೋಪಿಯು ಬಾಲಕಿಯ ವಿಶ್ವಾಸ ಗಳಿಸಿ, ಸುಮಾರು ಎಂಟೂವರೆ ತಿಂಗಳ ಹಿಂದೆ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button