Belagavi NewsBelgaum NewsKannada NewsKarnataka News

*ಗಣೇಶ ವಿಸರ್ಜನೆಗೆ ಬೆಳಗಾವಿ ಸಜ್ಜು: ಖಾಕಿ ಕಣ್ಗಾವಲಿನಲ್ಲಿ ಅದ್ಧೂರಿ ಮೆರವಣಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ 11 ದಿನಗಳಿಂದ ಭಕ್ತಿಭಾವದಿಂದ ನಡೆದ ಬೆಳಗಾವಿ ಗಣೇಶೋತ್ಸವಕ್ಕೆ ಇಂದು ಅದ್ಧೂರಿ ವಿಸರ್ಜನಾ ಮೆರವಣಿಗೆಯೊಂದಿಗೆ ತೆರೆ ಬೀಳಲಿದೆ. ನಗರದಾದ್ಯಂತ ಗಣೇಶ ವಿಸರ್ಜನೆಗೆ ಪೊಲೀಸ್ ಇಲಾಖೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಬೆಳಗಾವಿ ಮಹಾನಗರ ಸಂಪೂರ್ಣವಾಗಿ ಖಾಕಿ ಕಣ್ಗಾವಲಿನಲ್ಲಿದೆ.

ಈ ಬಾರಿ ನಗರದಲ್ಲಿ 1,056 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದ್ದು, ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬೆಳಿಗ್ಗೆಯಿಂದಲೇ ಮನೆ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದ್ದು, ಸಂಜೆ ಸಾರ್ವಜನಿಕ ಗಣೇಶ ಮೂರ್ತಿಗಳು ಭವ್ಯ ಮೆರವಣಿಗೆಯ ಮೂಲಕ ವಿಸರ್ಜನಾ ಸ್ಥಳಗಳತ್ತ ಸಾಗಲಿವೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಈಗಾಗಲೇ ರೂಟ್ ಮಾರ್ಚ್ ನಡೆಸಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

4 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಗಣೇಶ ವಿಸರ್ಜನಾ ಮೆರವಣಿಗೆಗೆ ಭದ್ರತೆ ಒದಗಿಸಲು ಮೂವರು ಡಿಸಿಪಿಗಳು, 6 ಎಸಿಪಿಗಳು, 21 ಸಿಪಿಐಗಳು, 153 ಎಎಸ್ಐಗಳು ಸೇರಿದಂತೆ ಸುಮಾರು 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ 10 ಕೆಎಸ್‌ಆರ್‌ಪಿ ತುಕಡಿಗಳು, 9 ಸಿಆರ್‌ಪಿಎಫ್ ತುಕಡಿಗಳು ಹಾಗೂ ಒಂದು ರ್ಯಾಪಿಡ್ ಆಕ್ಷನ್ ಫೋರ್ಸ್ ತಂಡವೂ ಭದ್ರತಾ ಕಾರ್ಯದಲ್ಲಿ ಇರಲಿದೆ.

ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

24 ರೌಡಿಗಳಿಗೆ ಗಡಿಪಾರು, ಗೂಂಡಾ ಕಾಯ್ದೆಯಡಿ ಕ್ರಮ

ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಈಗಾಗಲೇ 24 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ಕೆಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಡಿಜೆ ಬಳಕೆಯ ಮೇಲೂ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ಹೈಕೋರ್ಟ್ ನಿಯಮಗಳಂತೆ ಧ್ವನಿವರ್ಧಕ ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಪರಿಸರ ಮಂಡಳಿ ಅಧಿಕಾರಿಗಳೂ ಸ್ಥಳದಲ್ಲಿದ್ದು ಶಬ್ದಮಾಲಿನ್ಯ ಪರೀಕ್ಷೆ ನಡೆಸಲಿದ್ದಾರೆ. ನಿಯಮ ಉಲ್ಲಂಘಿಸಿ ಡಿಜೆ ಬಳಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಎರಡು-ಮೂರು ತಿಂಗಳಲ್ಲಿ 12 ಪ್ರಕರಣಗಳು ದಾಖಲಾಗಿವೆ.

ಲೇಸರ್ ಲೈಟ್ ಬಳಕೆಗೆ ಬ್ರೇಕ್

ವಿಸರ್ಜನಾ ಮೆರವಣಿಗೆಯಲ್ಲಿ ಲೇಸರ್ ಲೈಟ್ ಬಳಕೆಯ ಬಗ್ಗೆಯೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಲೇಸರ್ ಲೈಟ್ ಅಪಾಯಕಾರಿ ಆಗಿರುವುದರಿಂದ ಯಾರಾದರೂ ಬಳಸಿದರೆ ತಕ್ಷಣ ಜಪ್ತಿ ಮಾಡಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ.

ಗಣೇಶ ಮಂಡಳಿಗಳು ಸಾಧ್ಯವಾದಷ್ಟು ಬೇಗ ಮೆರವಣಿಗೆ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದ್ದು, ಮೆರವಣಿಗೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಪಿಲೇಶ್ವರ ಹೊಂಡದ ಬಳಿ ರಸ್ತೆ ಕಿರಿದಾಗಿರುವುದರಿಂದ ಮೆರವಣಿಗೆ ನಿಧಾನಗತಿಯಲ್ಲಿ ಸಾಗುವ ಸಾಧ್ಯತೆಯಿದೆ. ನಿರಂತರ 36 ಗಂಟೆಗಳ ಕಾಲ ಪೊಲೀಸರಿಂದ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುವುದರಿಂದ ಮಂಡಳಿಗಳು ಸಹಕರಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

7 ಕಡೆ ವಿಸರ್ಜನೆಗೆ ವ್ಯವಸ್ಥೆ

ನಗರದ ಒಟ್ಟು 1,056 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಏಳು ಕಡೆ ವ್ಯವಸ್ಥೆ ಮಾಡಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಪಿಲೇಶ್ವರ ಹೊಂಡದಲ್ಲೇ ಸುಮಾರು 200 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ.

ಇನ್ನು ಕೆಲವು ಗಣೇಶ ಮೂರ್ತಿಗಳು 25 ಅಡಿಗೂ ಹೆಚ್ಚು ಎತ್ತರ ಹೊಂದಿರುವುದರಿಂದ ವಿಸರ್ಜನೆಗೆ ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆಯಿದೆ. ಕಡಿಮೆ ಸಂಖ್ಯೆಯ ವಿಸರ್ಜನಾ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಮೂರ್ತಿಗಳನ್ನು ವಿಸರ್ಜಿಸಬೇಕಿರುವುದರಿಂದ ಮೆರವಣಿಗೆ ತಡವಾಗುವ ಸಾಧ್ಯತೆಯೂ ಇದೆ.

ಅಸಭ್ಯ ವರ್ತನೆ ಮಾಡಿದರೆ ಕಠಿಣ ಕ್ರಮ

ಮೆರವಣಿಗೆಯಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುವುದು, ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿ ಅಡ್ಡಿಪಡಿಸುವುದು ಅಥವಾ ಸಾರ್ವಜನಿಕರಿಗೆ ತೊಂದರೆ ನೀಡುವ ರೀತಿಯಲ್ಲಿ ಹುಚ್ಚಾಟ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಕೆಎಸ್‌ಆರ್‌ಟಿಸಿ ಚಾಲಕರನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 

ಅದ್ಧೂರಿ ಗಣೇಶೋತ್ಸವದ ಅಂತಿಮ ಘಟ್ಟಕ್ಕೆ ಬೆಳಗಾವಿ ಸಜ್ಜಾಗಿದ್ದು, ಭಕ್ತಿ, ಸಂಭ್ರಮದ ಜೊತೆಗೆ ಶಿಸ್ತು ಮತ್ತು ಶಾಂತಿ ಕಾಪಾಡಿಕೊಂಡು ವಿಸರ್ಜನಾ ಮೆರವಣಿಗೆ ನಡೆಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

Related Articles

Back to top button