Belagavi NewsBelgaum NewsKannada NewsKarnataka NewsPolitics

*ಸಿದ್ದರಾಮಯ್ಯ ಅವರೇ ನಮ್ಮ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ಅಂತರವಿಲ್ಲ. ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮ್ಮ ಕ್ಯಾಪ್ಟನ್‌, ನಾನು ವೈಸ್ ಕ್ಯಾಪ್ಟನ್‌ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರೇ ನಮ್ಮ ಕ್ಯಾಪ್ಟನ್‌. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ. ನಾನು ಮತ್ತು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ” ಎಂದು ಸ್ಪಷ್ಟಪಡಿಸಿದರು.

ಹಿಂದೆಯೂ ತಾವು ಹಾಗೂ ಸಿದ್ದರಾಮಯ್ಯ ಪ್ರತಿಬಾರಿಯೂ ಭೇಟಿಯಾಗುತ್ತಿರಲಿಲ್ಲ. ಪದೇಪದೇ ಜೊತೆಯಲ್ಲಿರುವುದೂ ಇರಲಿಲ್ಲ. ಅಗತ್ಯವಿದ್ದಾಗ ಭೇಟಿಯಾಗುತ್ತೇವೆ. ಈಗಲೂ ಅಷ್ಟೇ ಎಂದು ಹೇಳಿದ ಸತೀಶ್ ಜಾರಕಿಹೊಳಿ, ಇಬ್ಬರ ನಡುವೆ ಅಂತರವಿದೆ ಎಂಬ ವದಂತಿಗಳಿಗೆ ತೆರೆ ಎಳೆದರು.

“ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಹಾಗೆಯೇ ನಿಮಗೆ ನಾವು ಚೆನ್ನಾಗಿಲ್ಲ ಅನ್ನಿಸಬಹುದು. ಆದರೆ ಸಿದ್ದರಾಮಯ್ಯ ಹಾಗೂ ನಾನು ಚೆನ್ನಾಗಿಯೇ ಇದ್ದೇವೆ. ಸಿದ್ದರಾಮಯ್ಯ ಅವರ ಆಪ್ತರು ಅವರ ಜೊತೆಯಲ್ಲೇ ಇದ್ದಾರೆ. ಇಡಿ ದಾಳಿ ನಡೆದ ವೇಳೆ ಯತೀಂದ್ರ ಕೂಡ ಬಂದಿದ್ದರು” ಎಂದು ಹೇಳಿದರು.

ಯಾರದ್ದಾದರೂ ಮದುವೆ ಅಥವಾ ಗೃಹಪ್ರವೇಶ ಕಾರ್ಯಕ್ರಮಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ. ಎಲ್ಲರೂ ಬರಬೇಕು ಎಂದು ನಿರೀಕ್ಷಿಸುವುದು ಹೇಗೆ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರೊಂದಿಗೆ ಆಪ್ತರ ತಂಡ ಸದಾ ಇದೆ ಎಂದು ತಿಳಿಸಿದರು.

‘ಅದು ಅಹಿಂದ ಸಮಾವೇಶ ಅಲ್ಲ’

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶ ಅಹಿಂದ ಸಮಾವೇಶವಾಗಿರಲಿಲ್ಲ. ಅದು ಕೇವಲ ಹಿಂದುಳಿದ ವರ್ಗಗಳ ಸಮಾವೇಶವಾಗಿತ್ತು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಮಾವೇಶದ ಆಯೋಜಕರು ತಮ್ಮನ್ನು ಆಹ್ವಾನಿಸಿರಲಿಲ್ಲ. “ಯಾಕೆ ನನ್ನನ್ನು ಕರೆದಿಲ್ಲ ಎಂದು ಕೇಳಲು ಆಗುತ್ತಾ?” ಎಂದು ಪ್ರಶ್ನಿಸಿದ ಅವರು, ಅಹಿಂದ ಸಂಘಟನೆ ಭದ್ರವಾಗಿಯೇ ಇದೆ ಎಂದು ಸ್ಪಷ್ಟಪಡಿಸಿದರು.

Related Articles

Back to top button