*ಅಟ್ಟಿಕಾ ಗೋಲ್ಡ್ ಕಂಪನಿ ಮೇಲೆ ಇಡಿ ದಾಳಿ ಪ್ರಕರಣ: ವಶಪಡಿಸಿಕೊಂಡ ನಗದು, ಚಿನ್ನ-ಬೆಳ್ಳಿ ಬಗ್ಗೆ ಮಾಹಿತಿ ನೀಡಿದ ಜಾರಿ ನಿರ್ದೇಶನಾಲಯ*

ಪ್ರಗತಿವಾಹಿನಿ ಸುದ್ದಿ: ಅಕ್ರಮ ಹಣ ವರ್ಗಾವಣೆ ಆರೋಪಗಳ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಬಂಧಿತರ 16 ಸ್ಥಳಗಳ ಮೇಲೆ ಶೋಧ ನಡೆಸಿದ್ದಾರೆ.
ಸೆ.23 ಮತ್ತು 24ರಂದು ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ವಿಶಾಖಪಟ್ಟಣಂನಲ್ಲಿ ಈ ಶೋಧ ಕಾರ್ಯಾಚರಣೆ ನಡೆದಿದೆ ಎಂದು ED ಸೆ.25ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್, ಅದರ ಷೇರುದಾರರು ಹಾಗೂ ನಿರ್ದೇಶಕರು ಕಳವುಗೊಂಡ ಚಿನ್ನದ ವಸ್ತುಗಳನ್ನು ನಿಯಮಿತವಾಗಿ ಖರೀದಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಹಾಗೂ ವ್ಯವಹರಿಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಶೋಧ ನಡೆಸಲಾಗಿದೆ ಎಂದು ED ಹೇಳಿದೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವು ಎಫ್‌ಐಆರ್‌ಗಳು ಹಾಗೂ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು. ಆರೋಪಿತ ವ್ಯಕ್ತಿಗಳ ಹಣ ವರ್ಗಾವಣೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ED ಸಂಗ್ರಹಿಸಿದ ಪರಿಶೀಲಿಸಬಹುದಾದ ಮಾಹಿತಿಯೂ ತನಿಖೆಗೆ ಆಧಾರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರ್ದೇಶಕರು, ಮಾಜಿ ನಿರ್ದೇಶಕರು, ಷೇರುದಾರರು ಹಾಗೂ ಅಟ್ಟಿಕಾ ಗೋಲ್ಡ್‌ನ ಪ್ರಧಾನ ಕಚೇರಿ ಮತ್ತು ಶಾಖೆಗಳಿಗೆ ಸೇರಿದ ನಿವಾಸಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ಪ್ರಮುಖ ವ್ಯಕ್ತಿಗಳು ಶೋಧದ ವೇಳೆ ಗೈರು
ED ಪ್ರಕಾರ, ಪಿ.ಎಸ್. ಆಯೂಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಒಬೆದುಲ್ಲಾ ಎ., ಮೊಹಮ್ಮದ್ ಸಲ್ಮಾನ್ ಎ. ಹಾಗೂ ಅರ್ಬಿನ್ ತಾಜ್ ಎ. ಸೇರಿದಂತೆ ಪ್ರಮುಖ ವ್ಯಕ್ತಿಗಳು ಶೋಧ ಕಾರ್ಯಾಚರಣೆ ವೇಳೆ ಸಹಕರಿಸದೆ ತಲೆಮರೆಸಿಕೊಂಡಿದ್ದರು. ಶೋಧ ನಡೆಸಿದ ವ್ಯಾಪಾರಿಕ ಸ್ಥಳಗಳಲ್ಲಿನ ಉದ್ಯೋಗಿಗಳಿಗೂ ಲಭ್ಯವಿರದಂತೆ ಪ್ರಮುಖ ವ್ಯಕ್ತಿಗಳು ಸೂಚಿಸಿದ್ದರು ಎಂದು ED ಪ್ರಕಟಣೆ ತಿಳಿಸಿದೆ.
₹7.52 ಲಕ್ಷ ನಗದು ವಶ
ಶೋಧ ಕಾರ್ಯಾಚರಣೆಯಲ್ಲಿ ₹7,52,000 ನಗದು, ವಿದೇಶಿ ಕರೆನ್ಸಿ, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ED ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಸೂಚನೆ: ಮೇಲಿನ ಆರೋಪಗಳು ED ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಆರೋಪಗಳು ಮತ್ತು ತನಿಖೆಯ ಪ್ರಸ್ತುತ ಹಂತಕ್ಕೆ ಸಂಬಂಧಿಸಿದವು. ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಸಂಬಂಧಪಟ್ಟವರನ್ನು ಅಪರಾಧಿಗಳೆಂದು ಪರಿಗಣಿಸಲಾಗುವುದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




