*ಮಧ್ಯರಾತ್ರಿ ಮೊಬೈಲ್ ಅಂಗಡಿಗೆ ಕನ್ನ*: *ನಾಲ್ವರು ಶಾಲಾ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಮೊಬೈಲ್ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪದ ಮೇಲೆ ನಾಲ್ವರು ಶಾಲಾ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳು ಮಧ್ಯರಾತ್ರಿ ವಸತಿ ನಿಲಯದಿಂದ ಹೊರಬಂದು ಎರಡು ಮೊಬೈಲ್ ಅಂಗಡಿಗಳಿಗೆ ನುಗ್ಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ ಸುಮಾರು 1 ಗಂಟೆ ವೇಳೆಗೆ ವಸತಿ ನಿಲಯದಿಂದ ಸುಮಾರು ಎರಡು ಕಿಲೋಮೀಟರ್ ದೂರದ ಮುಂಡಗೋಡು ಪಟ್ಟಣಕ್ಕೆ ವಿದ್ಯಾರ್ಥಿಗಳು ತೆರಳಿದ್ದರು. ಮೊದಲು ಯಲ್ಲಾಪುರ ರಸ್ತೆಯಲ್ಲಿದ್ದ ಮೊಬೈಲ್ ಅಂಗಡಿಯ ಮೇಲ್ಛಾವಣಿ ಮೂಲಕ ಒಳನುಗ್ಗಿ ಹುಡುಕಾಟ ನಡೆಸಿದ್ದಾರೆ. ಅಲ್ಲಿ ಮೊಬೈಲ್ ಸಿಗದ ಹಿನ್ನೆಲೆಯಲ್ಲಿ ಶಿರಸಿ ರಸ್ತೆಯಲ್ಲಿರುವ ಮತ್ತೊಂದು ಅಂಗಡಿಯ ಕಬ್ಬಿಣದ ಬಾಗಿಲು ಹಾಗೂ ಬೀಗ ಮುರಿದು ಒಳನುಗ್ಗಿದ್ದಾರೆ.
ಅಂಗಡಿಯಿಂದ ರಿಪೇರಿಗೆ ಬಂದಿದ್ದ ಮೊಬೈಲ್‌ಗಳು, ಪವರ್ ಬ್ಯಾಂಕ್‌ಗಳು, ನೆಕ್‌ಬ್ಯಾಂಡ್‌ಗಳು, ಇಯರ್‌ಬಡ್ಸ್, ಸ್ಪೀಕರ್‌ಗಳು ಹಾಗೂ ಚಾರ್ಜರ್‌ಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ವಿದ್ಯಾರ್ಥಿಗಳ ಗುರುತು ಪತ್ತೆಹಚ್ಚಿ ರಾಮದುರ್ಗ ಮೂಲದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಮುಚ್ಚಿಟ್ಟಿದ್ದ 63,920 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬ್ಯಾಟರಿ, ಕಟರ್, ಸುತ್ತಿಗೆ ಹಾಗೂ ಕಬ್ಬಿಣ ಕತ್ತರಿಸುವ ಬ್ಲೇಡ್ ಸೇರಿದಂತೆ ವಿವಿಧ ಪರಿಕರಗಳನ್ನೂ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಈ ಹಿಂದೆ ಕೂಡ ಮುಂಡಗೋಡಿನ ಮತ್ತೊಂದು ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಇದೀಗ ವಸತಿ ಶಾಲೆಯಿಂದ ವಿದ್ಯಾರ್ಥಿಗಳು ಮಧ್ಯರಾತ್ರಿ ಹೇಗೆ ಹೊರಗೆ ಹೋಗಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಭದ್ರತಾ ವ್ಯವಸ್ಥೆ ಮತ್ತು ವಾರ್ಡನ್ ಇದ್ದರೂ ವಿದ್ಯಾರ್ಥಿಗಳು ನಿಲಯದಿಂದ ಹೊರಹೋಗಿರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಕಳ್ಳತನ ಪ್ರಕರಣದ ಜೊತೆಗೆ ವಿದ್ಯಾರ್ಥಿಗಳಿಗೆ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
*ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ ಬರ್ಬರ ಹತ್ಯೆ*: *7 ಮಂದಿಯ ಗ್ಯಾಂಗ್‌ನಿಂದ ಅಟ್ಯಾಕ್* – Pragati Vahini
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




