
ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದಲ್ಲಿ ಅಕ್ರಮವಾಗಿ ಉಡಗಳನ್ನು ಬೇಟೆಯಾಡಿ, ಅವುಗಳ ಮೃತದೇಹಗಳನ್ನು ಮನೆಯಲ್ಲಿ ಅಡಗಿಸಿಟ್ಟಿದ್ದ ಆರೋಪದ ಮೇಲೆ ತಂದೆ ಹಾಗೂ ಮಗನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಕಣ್ಣಿಗೇರಿ ಗ್ರಾಮದ ನಿವಾಸಿಗಳಾದ ಇನಾಸ್ ಬಸ್ಸಾಂವ್ ಸಿದ್ದಿ ಹಾಗೂ ಪ್ರಕಾಶ್ ಇನಾಸ್ ಸಿದ್ದಿ ಎಂದು ಗುರುತಿಸಲಾಗಿದೆ.
ಕಣ್ಣಿಗೇರಿ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಉಡಗಳನ್ನು ಬೇಟೆಯಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಮಾಹಿತಿ ಆಧರಿಸಿ ಅಧಿಕಾರಿಗಳು ಇನಾಸ್ ಬಸ್ಸಾಂವ್ ಸಿದ್ದಿ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮನೆಯಲ್ಲಿ ಬೇಟೆಯಾಡಿ ಕೊಲ್ಲಲಾಗಿದ್ದ ಎರಡು ಉಡಗಳ ಮೃತದೇಹಗಳು ಪತ್ತೆಯಾಗಿವೆ. ಕೂಡಲೇ ಅವುಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಗ ಇಬ್ಬರನ್ನೂ ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




