*11 ದಿನಗಳ ಬಳಿಕ ಕೆರೆಯಲ್ಲಿ ನವವಿವಾಹಿತೆ ಶವ ಪತ್ತೆ*: *ಪ್ರಿಯಾಂಕಾ ಸಾವಿನ ಸುತ್ತ ಅನುಮಾನದ ಹುತ್ತ*

ಪ್ರಗತಿವಾಹಿನಿ ಸುದ್ದಿ: ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಪ್ರಿಯಾಂಕಾ ಮೃತದೇಹ 11 ದಿನಗಳ ಬಳಿಕ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಸೆ.19ರ ರಾತ್ರಿ ಪತಿ ಜೊತೆಗಿದ್ದ ವೇಳೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಹೇಮಾವತಿ ನಾಲೆಗೆ ಪ್ರಿಯಾಂಕಾ ಜಿಗಿದಿದ್ದರು ಎನ್ನಲಾಗಿತ್ತು.
ಅಂದಿನಿಂದ ಪ್ರಿಯಾಂಕಾ ಮೃತದೇಹಕ್ಕಾಗಿ ಕುಟುಂಬಸ್ಥರು ಹಾಗೂ ಪೊಲೀಸರು ನಿರಂತರ ಶೋಧ ನಡೆಸಿದ್ದರು. ನಾಲೆಯ ನೀರು ನಿಲ್ಲಿಸಿ ಸುರಂಗ, ಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗಿತ್ತು.
ಹೇಮಾವತಿ ನಾಲೆಯಿಂದ ನೀರು ಹರಿದು ತುಂಬುವ ಕೆರೆಗಳಲ್ಲೂ ಶೋಧ ನಡೆಸಲಾಗಿತ್ತು. ತುರುವೇಕೆರೆ ಹಾಗೂ ತಿಪಟೂರು ಭಾಗದಲ್ಲಿ ಪೊಲೀಸರು ಡ್ರೋನ್ ಬಳಸಿ ಹುಡುಕಾಟ ನಡೆಸಿದ್ದರು. ಇದೀಗ ಕೋಲಾಳ ಗ್ರಾಮದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಶೋಧ ಕಾರ್ಯಕ್ಕೆ ಅಂತ್ಯವಾಗಿದೆ.
ಪ್ರಿಯಾಂಕಾ ಹಾಸನ ಜಿಲ್ಲೆಯ ಬಾಗೂರು ಗ್ರಾಮದ ಕೃಷ್ಣಸ್ವಾಮಿ ಹಾಗೂ ಶೋಭ ದಂಪತಿಯ ಪುತ್ರಿ. ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ ಜೊತೆ ವಿವಾಹವಾಗಿದ್ದ ಪ್ರಿಯಾಂಕಾ, ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದ ಪ್ರಿಯಾಂಕಾಗೆ ವರದಕ್ಷಿಣೆ ವಿಚಾರವಾಗಿ ಪತಿ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದರು.
ಪ್ರಿಯಾಂಕಾ ನಾಪತ್ತೆಯಾದ ಬಳಿಕ ಎರಡೂ ಕುಟುಂಬಗಳ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದವು. ಪತಿ ರಾಜಶೇಖರ ಹಾಗೂ ಕುಟುಂಬದ ವಿರುದ್ಧ ಪ್ರಿಯಾಂಕಾ ಪೋಷಕರು ಆರೋಪ ಮಾಡಿದ್ದರೆ, ರಾಜಶೇಖರ ಕುಟುಂಬ ಕೂಡ ಪ್ರಿಯಾಂಕಾ ಮತ್ತು ಪೋಷಕರ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು.
ಪ್ರಿಯಾಂಕಾಗೆ ಈ ಹಿಂದೆ ಮದುವೆಯಾಗಿತ್ತು ಎಂಬ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಿಸಲಾಗಿದೆ ಎಂದು ರಾಜಶೇಖರ ಕುಟುಂಬ ಆರೋಪಿಸಿತ್ತು. ಮದುವೆ ದಿನವೇ ಹಳೆಯ ಪತಿ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಬಂದಿದ್ದ. ಪ್ರಿಯಾಂಕಾ ಮದುವೆಗೆ ಒಪ್ಪದಿದ್ದಾಗ ಪೋಷಕರು ಒತ್ತಡ ಹೇರಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಇದೇ ವೇಳೆ ಪ್ರಿಯಾಂಕಾಗೆ ಈಜು ಬರುತ್ತಿದ್ದ ಕಾರಣ ನಾಲೆಗೆ ಜಿಗಿದು ಮೃತಪಟ್ಟಿರುವ ಬಗ್ಗೆಯೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ 11 ದಿನಗಳ ಬಳಿಕ ಕೆರೆಯಲ್ಲಿ ಮೃತದೇಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾವಿಗೆ ನಿಖರ ಕಾರಣವೇನು ಎಂಬ ಪ್ರಶ್ನೆ ಎದುರಾಗಿದೆ. ಪ್ರಿಯಾಂಕಾ ಸಾವಿನ ಹಿಂದಿನ ಸಂಪೂರ್ಣ ಸತ್ಯ ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟವಾಗಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




