Kannada NewsKarnataka NewsLatestNational

*ಸ್ಮಿತ್ ಮಚ್ಚರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ*: *ಭಾರತೀಯ ಪೈಲಟ್ ಶ್ಲಾಘಿಸಿದ ಮೋದಿ*

ಪ್ರಗತಿವಾಹಿನಿ ಸುದ್ದಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಘಟನೆ ವೇಳೆ ಧೈರ್ಯ ತೋರಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದರೂ ಪರಿಸ್ಥಿತಿಯನ್ನು ಎದುರಿಸಿ ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ರಕ್ಷಿಸುವಲ್ಲಿ ಸ್ಮಿತ್ ಮಚ್ಚರ್ ಪ್ರಮುಖ ಪಾತ್ರ ವಹಿಸಿದ್ದು ಭಾರತಕ್ಕೆ ಅವರ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ಹೀರೋ ಎಂದು ಬಣ್ಣಿಸಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿ ಗಾಯಗೊಂಡಿದ್ದರೂ ಪ್ರಯಾಣಿಕರ ಸುರಕ್ಷತೆಗಾಗಿ ತೆಗೆದುಕೊಂಡ ನಿರ್ಧಾರ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಈ ಸಾಹಸದಿಂದ ನೂರಾರು ಪ್ರಯಾಣಿಕರ ಜೀವ ಉಳಿಯಲು ಹಾಗೂ ದೊಡ್ಡ ವಿಮಾನ ದುರಂತ ತಪ್ಪಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕ್ಯಾಪ್ಟನ್ ಸ್ಮಿತ್ ಮಚ್ಚರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದಿರುವ ಮೋದಿ, ಶೀಘ್ರ ಚೇತರಿಕೆಗೆ ಶುಭ ಹಾರೈಸಿದ್ದಾರೆ.

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈಯ FZ1073 ವಿಮಾನದಲ್ಲಿ 174 ಪ್ರಯಾಣಿಕರಿದ್ದರು. ಬೋಯಿಂಗ್ 737 MAX 8 ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳ ನಡುವೆ ಏಕಾಏಕಿ ಸಂಘರ್ಷ ಉಂಟಾಗಿದೆ.

ಇಸ್ರೇಲಿ ಅಧಿಕಾರಿಗಳ ಪ್ರಕಾರ, ಸಹ-ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡರೂ ಕಾಕ್‌ಪಿಟ್ ಬಾಗಿಲು ತೆರೆಯಲು ಸಾಧ್ಯವಾಗಿದ್ದು, ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳನುಗ್ಗಿ ದಾಳಿ ನಡೆಸಿದ ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ವಿಮಾನದ ಎತ್ತರದಲ್ಲಿ ತೀವ್ರ ಕುಸಿತವೂ ಸಂಭವಿಸಿದೆ. ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ವಿಮಾನ ಕೆಲವೇ ಕ್ಷಣಗಳಲ್ಲಿ ಸುಮಾರು 14,000 ಅಡಿಗಳಷ್ಟು ಕೆಳಕ್ಕೆ ಇಳಿದಿತ್ತು ಎಂದು ವರದಿಯಾಗಿದೆ.

ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು. ವಿಮಾನದಲ್ಲಿದ್ದ ಮತ್ತಿಬ್ಬರು ಫ್ಲೈದುಬೈ ಪೈಲಟ್‌ಗಳು ನಿಯಂತ್ರಣ ಪಡೆದು ಸುರಕ್ಷಿತ ಲ್ಯಾಂಡಿಂಗ್‌ಗೆ ನೆರವಾದರು. ಘಟನೆಯಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹ-ಪೈಲಟ್‌ನನ್ನು ಸೌದಿ ಅರೇಬಿಯಾದಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ದಾಳಿಯ ಉದ್ದೇಶದ ಬಗ್ಗೆ ತನಿಖೆ ಮುಂದುವರಿದಿದ್ದು, ಫ್ಲೈದುಬೈ ಕೂಡ ಘಟನೆಯ ಕುರಿತು ಊಹಾಪೋಹಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದೆ.

*ಚಾಕು ಇರಿತಕ್ಕೂ ಜಗ್ಗದ ಭಾರತೀಯ ಪೈಲಟ್*: *174 ಪ್ರಯಾಣಿಕರ ಜೀವ ಉಳಿಸಿದ ಹೀರೋಗೆ ನೆತನ್ಯಾಹು ಸೆಲ್ಯೂಟ್* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button