*ಮಂಡೋಳಿಯಲ್ಲಿ ₹2 ಕೋಟಿ ವೆಚ್ಚದ ದೇವಾಲಯಗಳ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಹನುಮಾನ, ಶ್ರೀ ವಿಠ್ಠಲ–ರುಕ್ಮಾಯಿ ಹಾಗೂ ಶ್ರೀ ಕಲ್ಮೇಶ್ವರ ಮಂದಿರಗಳ ಕಟ್ಟಡ ಕಾಮಗಾರಿಗಳ ಪ್ರಗತಿಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲಿಸಿದರು.
ಗ್ರಾಮದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಿರುವ ಈ ದೇವಾಲಯಗಳ ನಿರ್ಮಾಣ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕಾಮಗಾರಿಯ ವಿವಿಧ ಹಂತಗಳ ಕುರಿತು ಸ್ಥಳೀಯರು ಹಾಗೂ ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡರು.
ದೇವಾಲಯಗಳ ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದಂತೆ ಗಮನಹರಿಸುವಂತೆ ಅವರು ಸೂಚಿಸಿದರು. ನಿರ್ಮಾಣ ಕಾಮಗಾರಿಯ ವಿನ್ಯಾಸ, ಬಳಸುತ್ತಿರುವ ಸಾಮಗ್ರಿಗಳ ಗುಣಮಟ್ಟ, ಕಟ್ಟಡದ ಬಾಳಿಕೆ ಹಾಗೂ ಭಕ್ತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಮಂದಿರಗಳ ನಿರ್ಮಾಣ ಕಾರ್ಯವನ್ನು ನಿಗದಿತ ಯೋಜನೆಯಂತೆ ಮುಂದುವರಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ ಅವರು, ದೇವಾಲಯಗಳ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳ ಬಗ್ಗೆಯೂ ಗಮನ ಹರಿಸುವಂತೆ ತಿಳಿಸಿದರು.
ಮಂಡೋಳಿ ಗ್ರಾಮದ ಧಾರ್ಮಿಕ ಪರಂಪರೆ ಹಾಗೂ ಜನರ ಭಕ್ತಿಭಾವಕ್ಕೆ ಅನುಗುಣವಾಗಿ ಸುಂದರ ಮತ್ತು ಗುಣಮಟ್ಟದ ದೇವಾಲಯಗಳು ನಿರ್ಮಾಣವಾಗಬೇಕು. ಗ್ರಾಮಸ್ಥರು ಹಾಗೂ ಭಕ್ತರಿಗೆ ಈ ಮಂದಿರಗಳು ಇನ್ನಷ್ಟು ಅನುಕೂಲಕರವಾಗುವಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ದೇವಾಲಯಗಳ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



