Kannada NewsKarnataka NewsPolitics

*BREAKING: ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಕುಳಿತ ಸಿಎಂ ಡಿ.ಕೆ.ಶಿವಕುಮಾರ್: ಇಡೀ ಸಚಿವ ಸಂಪುಟ ಸಾಥ್*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಪ್ರಕರಿಯೆಯಲ್ಲಿ ಅಕ್ರಮ ನಡೆಯುತ್ತಿದ್ದು, ಫಾರ್ಮ್ 7 ದುರ್ಬಳಕೆ ಮಾಡಿಕೊಂಡು ಮತದಾರರ ಹೆಸರು ಡಿಲಿಟ್ ಮಾಡಲಾಗುತ್ತಿದೆ. ಇಂತಹ ತಪ್ಪಿತಸ್ಥರ ವಿರುದ್ಧ ಚುನಾವಣಾ ಆಯೋಗ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯ ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ್ದಾರೆ.

ಇಂದು ಗುರುವಾರವಾಗಿರುವುದರಿಂದ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಸಬೇಕಾಗಿತ್ತು. ಆದರೆ ಎಸ್ಐಆರ್ ಅಕ್ರಮ ಹಾಗೂ ಫಾರ್ಮ್- 7 ದುರುಪಯೋಗಪಡಿಸಿಕೊಂಡು ಮತದಾರರ ಹೆಸರು ಡಿಲಿಟ್ ಮಾಡಲಾಗುತ್ತಿದೆ. ಮೊದಲು ಮತದಾರರನ್ನು ಉಳಿಸುವುದು ಸರ್ಕಾರದ ಕರ್ತವ್ಯ. ಮತದಾರರು ಉಳಿದರೆ ನಾನು ಸಿಎಂ ಆಗಿ ಇರಲು, ಸರ್ಕಾರ ಉಳಿಯಲು ಸಾಧ್ಯ ಎಂದರು. ಇದೇ ವೇಳೆ ಸಚಿವ ಸಂಪುಟ ಸಭೆ ರದ್ದುಗೊಳಿಸಿ ಎಲ್ಲಾ ಸಚಿವರಿಗೂ ಧರಣಿಗೆ ಬರುವಂತೆ ಸಿಎಂ ಸೂಚಿಸಿದರು.

ಎಸ್ಐಆರ‍್ ಅಕ್ರಮದ ವಿರುದ್ಧ ಸಿಡಿದೆದ್ದಿರುವ ಸಿಎಂ, ಸಚಿವರೊಂದಿಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಆಗಮಿಸಿದರು. ದೂರು ನೀಡಿದ ಬಳಿಕ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ಆದರೆ ಚುನಾವಣ ಆಯುಕ್ತರು ಪರಿಶೀಲನೆಗೆ ಒಂದು ದಿನವಾದರೂ ಸಮಯ ನೀಡಿ ಎಂದು ಕೇಳಿದ್ದಾರೆ. ಇದರಿಂದ ಪ್ರಕರಣ ದಾಖಲಾಗುವವರೆಗೂ ಆಯೋಗದ ಕಚೇರಿ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಸಿಎಂ ಡಿ.ಕೆ.ಶಿವಕುಮಾರ್, ಚುನಾವಣಾ ಆಯೋಗದ ಹೊರಬಂದು ಆಯೋಗದ ಮುಂದೆ ಧರಣಿ ಕುಳಿತಿದ್ದಾರೆ.

ಮುಖ್ಯಮಂತ್ರಿಗಳಿಗೆ ಇಡೀ ಮಂತ್ರಿ ಮಂಡಲ, ಶಾಸಕರು ಸಾಥ್ ನೀಡಿದ್ದಾರೆ. ಸರ್ಕಾರದ ಸಚಿವರೆಲ್ಲರೂ ಸಿಎಂ ಜೊತೆ ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ್ದಾರೆ.

ಮತ್ತೊಂದೆಡೆ ಆಯೋಗದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಎಂ ಹಾಗೂ ಸಚಿವ ಧರಣಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಚೇರಿ ಬಳಿ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button