CrimeKannada NewsKarnataka News

*ಜಲಾಶಯದಲ್ಲಿ ತಾಯಿ-ಮಗ ಮುಳುಗಿ ಸಾವು: ತಂದೆ-ಮಗಳು ಜಸ್ಟ್ ಪಾರು*

ಪ್ರಗತಿವಾಹಿನಿ ಸುದ್ದಿ: ರಜೆಯ ದಿನ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ಕುಟುಂಬವೊಂದಕ್ಕೆ ದುರಂತ ಎದುರಾಗಿದೆ. ಶ್ರೀನಿವಾಸ ಸಾಗರ ಜಲಾಶಯದಲ್ಲಿ ನೀರಿಗಿಳಿದ ವೇಳೆ ತಾಯಿ ಹಾಗೂ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಮುಂದಾದ ತಂದೆ ಹಾಗೂ ಮಗಳು ಅದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಸಮೀಪದ ಗಂಗವಾರ ಗ್ರಾಮದ ರೇಖಾ (39) ಹಾಗೂ ಅವರ ಪುತ್ರ ಹೇಮಂತ್ (19) ಮೃತಪಟ್ಟವರು. ಕುಟುಂಬದ ಮುಖ್ಯಸ್ಥ ಆಟೋ ಚಾಲಕ ರಾಜು ಹಾಗೂ ಪುತ್ರಿ ದೀಪಾ ಅಪಾಯದಿಂದ ಪಾರಾದವರು.

ಗಾಂಧಿ ಜಯಂತಿ ಅಂಗವಾಗಿ ಸರ್ಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ರಾಜು ಅವರು ಪತ್ನಿ ರೇಖಾ, ಪುತ್ರ ಹೇಮಂತ್ ಹಾಗೂ ಪುತ್ರಿ ದೀಪಾ ಅವರೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ವೀಕ್ಷಣೆಗೆ ತೆರಳಿದ್ದರು. 

ಜಲಾಶಯದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಿದ್ದ ಕುಟುಂಬಸ್ಥರು ಬಳಿಕ ನೀರಿನಲ್ಲಿ ಆಟವಾಡಲು ಜಲಾಶಯಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

ಈ ವೇಳೆ ನೀರಿನ ಆಳದ ಅರಿವಿಲ್ಲದೆ ರೇಖಾ ಹಾಗೂ ಹೇಮಂತ್ ಅಪಾಯದ ಸ್ಥಳಕ್ಕೆ ತೆರಳಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗತೊಡಗಿದ್ದಾರೆ. ಇದನ್ನು ಗಮನಿಸಿದ ರಾಜು ಹಾಗೂ ದೀಪಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರೂ ಕೂಡ ಕೆಲಕಾಲ ಅಪಾಯಕ್ಕೆ ಸಿಲುಕಿದ್ದರು.

ಘಟನೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ನೀರಿಗಿಳಿದು ರಾಜು ಹಾಗೂ ದೀಪಾ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. 

ಆದರೆ ರೇಖಾ ಹಾಗೂ ಹೇಮಂತ್ ಅವರನ್ನು ರಕ್ಷಿಸಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಜಲಾಶಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸುದೀರ್ಘ ಕಾರ್ಯಾಚರಣೆಯ ಬಳಿಕ ರೇಖಾ ಹಾಗೂ ಹೇಮಂತ್ ಅವರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಯಿತು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಜೆಯ ದಿನ ಸಂತಸದಿಂದ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ಕುಟುಂಬದಲ್ಲಿ ನಡೆದ ಈ ದುರಂತದಿಂದ ಇದೀಗ ದುಃಖ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button