Belagavi NewsBelgaum NewsCrimeElection NewsKannada NewsKarnataka NewsNational

*ಸಂಶಯಪಟ್ಟು ಪತ್ನಿ ಕೊಲೆ ಮಾಡಿದ ಪತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹ ಹಾಗೂ ಪತ್ನಿಯ ಮೇಲಿನ ಸಂಶಯದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಬೈಲಹೊಂಗಲದಲ್ಲಿ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೈಲಹೊಂಗಲದ ಇಂದಿರಾನಗರ ನಿವಾಸಿ ಲಕ್ಷ್ಮಿ (32) ಮೃತಪಟ್ಟ ಮಹಿಳೆ. ಅವರ ಪತಿ ರಾಜು ಲಕ್ಷ್ಮಣ ಮಾಡಮಗೇರಿ (33) ಕೊಲೆ ಆರೋಪ ಎದುರಿಸುತ್ತಿರುವ ವ್ಯಕ್ತಿ. ದಂಪತಿ ನಡುವೆ ಕೌಟುಂಬಿಕ ಕಲಹ ಇದ್ದು, ಲಕ್ಷ್ಮಿ ಅವರು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಇದೇ ವೇಳೆ ಪತ್ನಿಗೆ ಬೇರೊಬ್ಬ ಪುರುಷನೊಂದಿಗೆ ಸಂಬಂಧವಿದೆ ಎಂಬ ಸಂಶಯ ರಾಜುವಿಗೆ ಇತ್ತು ಎಂದು ತಿಳಿಸಲಾಗಿದೆ.

ಸೆಪ್ಟೆಂಬರ್ 27ರಂದು ಲಕ್ಷ್ಮಿ ಅವರು ಕುಡಲಾ ಪಿನ್ನಾ ಮಾರಾಟಕ್ಕಾಗಿ ಅರವಳ್ಳಿ ಹಾಗೂ ನಯಾನಗರ ಗ್ರಾಮಗಳ ಕಡೆಗೆ ತೆರಳಿದ್ದರು. ಮಧ್ಯಾಹ್ನ 12.45ರಿಂದ ಸಂಜೆ 7.30ರ ನಡುವಿನ ಅವಧಿಯಲ್ಲಿ ಅಮಟೂರ ಗ್ರಾಮದ ಸರ್ಕಾರಿ ಚಿಕ್ಕಹಳ್ಳದ ಬಳಿ ರಾಜು, ಲಕ್ಷ್ಮಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪತ್ನಿಯ ಕುತ್ತಿಗೆಗೆ ಆಕೆಯ ಓಡನಿಯಿಂದ ಬಿಗಿಯಾಗಿ ಕಟ್ಟಿ ಉಸಿರುಗಟ್ಟಿಸಿದ ಬಳಿಕ, ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ರಾಕೇಶ ಭೀಮಪ್ಪ ಗೊಲ್ಲರ ನೀಡಿದ ದೂರಿನ ಆಧಾರದ ಮೇಲೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 310/2026ರ ಅಡಿಯಲ್ಲಿ ಬಿಎನ್‌ಎಸ್ ಕಲಂ 103(1)ರಡಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸೆಪ್ಟೆಂಬರ್ 29ರಂದು ಆರೋಪಿ ರಾಜು ಲಕ್ಷ್ಮಣ ಮಾಡಮಗೇರಿಯನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಬೈಲಹೊಂಗಲ ಉಪವಿಭಾಗದ ಡಿವೈಎಸ್‌ಪಿ ಡಾ. ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಸಿ. ಯಲಿಗಾರ, ಪಿಎಸ್‌ಐ ಡಬ್ಲ್ಯೂ.ಎಚ್. ಯಾದವಾಡ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button