
*ರಾಜಕೀಯ ಲೇಪವಿಲ್ಲದೆ ವೈಭವದ ದಸರಾ ನಡೆಯಬೇಕು: ಸಿಎಂ ಡಿ ಕೆ ಶಿವಕುಮಾರ್*
*ಜಾತಿ, ಧರ್ಮ ಬೇಧವಿಲ್ಲದೆ ಸ್ವಾಮೀಜಿಗಳು, ಧರ್ಮ ಗುರುಗಳಿಗೆ ಆಹ್ವಾನ*
*ಅಂಬಾರಿ ಹೊರಲು ಐದು ಆನೆಗಳಿಗೆ ತರಬೇತಿ*
*ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಪಟುಗಳಿಗೆ ದಸರಾ ಕ್ರೀಡಾಕೂಟದಲ್ಲಿ ಗೌರವ*
*ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೆಂಬಲವಾಗಿ ಸಚಿವರು ಕೆಲಸ ಮಾಡಬೇಕು*
*ಖಾಸಗಿ ಫ್ಲೆಕ್ಸ್ ಗಳಿಗೆ ಅವಕಾಶವಿಲ್ಲ, ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕು*
*ದಸರಾ ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳು*
ಪ್ರಗತಿವಾಹಿನಿ ಸುದ್ದಿ, *ಮೈಸೂರು*
“ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ದಸರಾ ನಡೆಯಬೇಕು. ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರಲು ಧನಂಜಯ, ಏಕಲವ್ಯ ಸೇರಿ ಐದು ಆನೆಗಳಿಗೆ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿ ನೀಡಲುಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಶನಿವಾರ ಮಾತನಾಡಿದರು.
“ರಾಜ ವಂಶಸ್ಥರಿಗೂ ಗೌರವ ಪೂರ್ವಕ ಆಹ್ವಾನ ನೀಡಬೇಕು. ಯಾರ ಸ್ಥಾನ, ಸ್ವಾಭಿಮಾನಕ್ಕೂ ಧಕ್ಕೆ ತರುವ ಕೆಲಸ ಆಗಬಾರದು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಇಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ದಸರಾ ನಡೆಸಲು ಸೂಚಿಸಲಾಗಿದೆ” ಎಂದರು.
*ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಗೌರವ*
ಏಷ್ಯನ್ ಗೇಮ್ ನಲ್ಲಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಪಟುಗಳನ್ನು ದಸರಾ ಕ್ರೀಡಾಕೂಟಕ್ಕೆ ಆಹ್ವಾನಿಸಿ ಗೌರವ ನೀಡಬೇಕು ಎಂದು ಸೂಚನೆ ನೀಡಿದರು.
*ಎಲ್ಲಾ ಸಚಿವರಿಗೂ ಹೊಣೆ*
“ದಸರಾ ಹನ್ನೊಂದು ದಿನವೂ ದಿನಕ್ಕೆ ಇಬ್ಬರು ಸಚಿವರಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೆಂಬಲವಾಗಿ ಕೆಲಸ ಮಾಡಬೇಕು. ಏಕೆಂದರೆ ಒಬ್ಬರ ಮೇಲೆಯೇ ಒತ್ತಡ ಹೆಚ್ಚುವುದನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲರ ಸಲಹೆಯಂತೆ ದಸರಾ ಕಾರ್ಯಕ್ರಮ ನಡೆಸಬೇಕು” ಎಂದು ಸೂಚನೆ ನೀಡಿದರು.
*ನನ್ನ ಫೋಟೊ ಸೇರಿದಂತೆ ಯಾವ ಫೋಟೊಗಳನ್ನೂ ಹಾಕಬಾರದು*
“ನಗರದಲ್ಲಿ ಎಲ್ಲಿಯೂ ಖಾಸಗಿ ಪ್ಲೆಕ್ಸ್ ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೊ ಸೇರಿದಂತೆ ಯಾವ ಫೋಟೊಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕು. ದಸರಾ ಸೌಂದರ್ಯವನ್ನು ಯಾವ ಕಾರಣಕ್ಕೂ ಹಾಳುಗೆಡವಬಾರದು” ಎಂದು ಸೂಚಿಸಿದರು.
*21 ದಿನಗಳ ಕಾಲ ದೀಪಾಲಂಕಾರ*
“ಈ ವರ್ಷ ದೀಪಾಲಂಕಾರವನ್ನು ವಿಶೇಷವಾಗಿ ಆಯೋಜನೆ ಮಾಡಲಾಗುವುದು. 21 ದಿನಗಳ ಕಾಲ ಇದು ನಡೆಯಲಿದೆ. ಯುವದಸರಾ ಕಂಬಳ ಸೇರಿದಂತೆ ಇತರೆಡೆ ಆಹಾರ ಮೇಳ ಆಯೋಜನೆ ಮಾಡಬೇಕು. ಅಲ್ಲಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ಈ ಬಾರಿ ಯುವ ದಸರಾದಲ್ಲಿ ಎರಡು ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ” ಎಂದರು.
*ಪ್ರವಾಸಿಗರಿಂದ ಸುಲಿಗೆ ಮಾಡಬಾರದು*
ಹೋಟೆಲ್ ಗಳು ಯಾವುದೇ ಕಾರಣಕ್ಕೂ ಪ್ರವಾಸಿಗರಿಂದ ಸುಲಿಗೆ ಮಾಡಬಾರದು. ಗೌರವಯುತ ಮೊತ್ತ ಪಡೆಯಬೇಕು ಎಂದು ಸೂಚಿಸಲಾಗಿದೆ.
*ಜಂಬೂ ಸವಾರಿ: ಆಸನಗಳಿಗೆ ನಂಬರ್ ಹಾಗೂ ಹೆಸರು*
ದೇಶ- ವಿದೇಶಗಳ ರಾಯಬಾರಿಗಳಿಗೆ ಆಹ್ವಾನ ನೀಡಲಾಗಿದೆ. ಅವರಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುವುದು. ಹಣ ಕೊಟ್ಟು ಜಂಬೂ ಸವಾರಿ ವೀಕ್ಷಣೆ ಮಾಡುವವರಿಗೆ ಸೂಕ್ತ ಆಸನ ವ್ಯವಸ್ಥೆ, ಆಸನಗಳಿಗೆ ನಂಬರ್ ಹಾಗೂ ಹೆಸರು ಹಾಕಬೇಕು. ಯಾರೋ ಬಂದು ಕೂರಬಾರದು. ಜೊತೆಗೆ ಎಷ್ಟು ಗಂಟೆಗೆ ಒಳಗೆ ಬರಬೇಕು ಎಂಬುದನ್ನೂ ತಿಳಿಸಬೇಕು ಎಂದು ಸೂಚಿಸಿದರು.
*ವೈವಿಧ್ಯಮಯ ಕಲಾ ತಂಡಗಳಿಗೆ ಅವಕಾಶ*
ದಸರಾ ಮೆರವಣಿಗೆ ಹೋಗುವಾಗ ಒಂದೇ ರೀತಿಯ ತಂಡಗಳಿಗೆ ಅವಕಾಶ ನೀಡಬಾರದು. ವೈವಿಧ್ಯಮಯ ಕಲಾ ತಂಡಗಳಿಗೆ ಅವಕಾಶ ನೀಡಬೇಕು. ಟ್ಯಾಬ್ಲೋಗಳೂ ಸಹ ಶಿಸ್ತು ಕಾಪಾಡಬೇಕು ಎಂದರು.
*ಗವಿಸಿದ್ದೇಶ್ವರ ಶ್ರೀಗಳಿಗೆ ದಸರಾ ಉದ್ಘಾಟನೆಗೆ ಭಾನುವಾರ ಆಹ್ವಾನ*
“ಭಾನುವಾರ ಗವಿಸಿದ್ದೇಶ್ವರ ಶ್ರೀಗಳನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ಜಿಲ್ಲಾಡಳಿತ ತೆರಳಲಿದೆ. ಜಾತಿ, ಧರ್ಮ ಬೇಧವಿಲ್ಲದೆ ಎಲ್ಲ ಮಠಾಧೀಶರು, ಕ್ರೈಸ್ತ, ಬೌದ್ಧ, ಸಿಖ್, ಅಲ್ಪಸಂಖ್ಯಾತರು ಮತ್ತಿತರ ಧರ್ಮಗಳ ಗುರುಗಳನ್ನು ಆಹ್ವಾನಿಸಲು ಸೂಚಿಸಲಾಗಿದೆ. ಧಾರ್ಮಿಕ ಪ್ರಮುಖರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುವುದು” ಎಂದರು.
*ಟಿಬೆಟಿಯನ್ನರ ಸ್ತಬ್ಧಚಿತ್ರಕ್ಕೆ ಅವಕಾಶ*
“ಟಿಬೆಟಿಯನ್ನರಿಗೂ ದಸರಾ ಮೆರವಣಿಗೆಯಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಂಗಳೂರಿನ ಇತಿಹಾಸ ಬಿಂಬಿಸುವ ಟ್ಯಾಬ್ಲೋ, ಕೇರಳ, ತಮಿಳುನಾಡು ಹಾಗೂ ಆಂದ್ರಪ್ರದೇಶದವರಿಗೂ ಅವರ ಪರಂಪರೆ ಬಿಂಬಿಸುವ ಟ್ಯಾಬ್ಲೋಗಳನ್ನು ಕಳುಹಿಸಿ ಎಂದು ಪತ್ರ ಬರೆಯಲಾಗಿದೆ. ಜೊತೆಗೆ ಚಿತ್ರರಂಗದವರೂ ಸಹ ಈ ಬಾರಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಜಯಮಾಲ ಅವರೊಟ್ಟಿಗೆ ಈ ಬಗ್ಗೆ ಸಂವಹನ ನಡೆಸಲಾಗಿದೆ” ಎಂದರು.
*ತುಳುನಾಡಿನ ಪ್ರತ್ಯೇಕ ಸ್ತಬ್ಧಚಿತ್ರ*
“ತುಳುನಾಡಿಗೆ ಸುದೀರ್ಘ ಇತಿಹಾಸವಿದೆ. ಅವರ ಭಾವನಾತ್ಮಕ ವಿಚಾರಕ್ಕೆ ಗೌರವ ಸಲ್ಲಿಸಿದ್ದು, ಅವರ ಸಂಸ್ಕೃತಿ ಬಿಂಬಿಸಲು ಪ್ರತ್ಯೇಕ ಸ್ತಬ್ಧಚಿತ್ರ ಸಿದ್ಧಪಡಿಸಲು ಆಹ್ವಾನಿಸಲಾಗಿದೆ” ಎಂದರು ಸೂಚಿಸಿದರು.
*ಪೌರ ಕಾರ್ಮಿಕರು ದೇಶದ ಆಸ್ತಿ*
“ದಸರಾ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಗೌರವ ನೀಡಲಾಗುವುದು. ಚಾಮರಾಜನಗರ, ಮಡಿಕೇರಿ, ಶ್ರೀರಂಗಪಟ್ಟಣ ದಸರಾ ಎಂದಿನಂತೆ ನಡೆಯಲಿದೆ. ಐತಿಹಾಸಿಕವಾದ ಡ್ರೋಣ್ ಶೋ ಆಯೋಜನೆ ಮಾಡಲಾಗುವುದು” ಎಂದರು.
*ದಸರಾ ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳು*
“ಭೂ ಸೇನೆ, ವಾಯು ಹಾಗೂ ಜಲಸೇನೆ ಮೂರು ತಂಡಗಳು ಜಂಬೂಸವಾರಿಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದು, ಇವರ ಶಿಸ್ತು ಎಲ್ಲರಿಗೂ ಮಾದರಿಯಾಗಬೇಕು. ಕಂಬಳವು ಸಂಪ್ರದಾಯದ ಪ್ರಕಾರ ನಡೆಯಬೇಕು. ಜನರಿಗೆ ವೀಕ್ಷಿಸಲು ಅಲ್ಲಲ್ಲಿ ಎಲ್.ಇ.ಡಿ ಪರದೆಗಳನ್ನು ಅಳವಡಿಸಿ ನೇರ ಪ್ರಸಾರ ನಡೆಯುವಂತೆ ನೋಡಿಕೊಳ್ಳಬೇಕು. ರಸ್ತೆಗಳಲ್ಲಿ ಫ್ಲೆಕ್ಸ್ ಅಳವಡಿಸಬಾರದು ಎಂದು ಸೂಚಿಸಲಾಗಿದೆ” ಎಂದರು.
“ಮೆರವಣಿಗೆಯಲ್ಲಿ ಕಲಾತಂಡಗಳು ಪುನರಾವರ್ತನೆಯಾಗಬಾರದು. ಕಲಾವಿದರು ಹಾಗೂ ಸುತ್ತಮುತ್ತಲು ಮೊಬೈಲ್ ಬಳಕೆ ಮಾಡಬಾರದು. ಧರಿಸುವ ಸಮವಸ್ತ್ರಗಳು ಒಂದೇ ರೀತಿ ಇರಬೇಕು” ಎಂದು ತಿಳಿಸಿದರು.
*ಜಂಬೂಸವಾರಿ ವೀಕ್ಷಣೆಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಿ*
“ಹಣ ಕೊಟ್ಟು ಟಿಕೇಟ್ ಖರೀದಿಸಿ ಜಂಬೂಸವಾರಿ ವೀಕ್ಷಿಸಲು ಆಗಮಿಸುವವರಿಗೆ ಸೂಕ್ತ ಆಸನದ ವ್ಯವಸ್ಥೆಯಾಗಬೇಕು. ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಚಿವರಿಗೆ ಕಡ್ಡಾಯವಾಗಿ ಆಹ್ವಾನ ಪತ್ರಿಕೆ ತಲುಪಬೇಕು” ಎಂದು ಹೇಳಿದರು.
*ಮೈಸೂರು ದಸರಾ ಮಹೋತ್ಸವ-2026: ಅದ್ಧೂರಿ ಹಾಗೂ ಅರ್ಥಪೂರ್ಣ ಆಚರಣೆಗೆ ವ್ಯಾಪಕ ಸಿದ್ಧತೆ – ಧರ್ಮಗುರುಗಳಿಗೆ, ವಿದೇಶಿ ರಾಯಭಾರಿಗಳಿಗೆ ವಿಶೇಷ ಆಹ್ವಾನ.*
*ಜಂಬೂಸವಾರಿಯಲ್ಲಿ ತ್ರಿವಿಧ ಪಡೆ, ಟಿಬೆಟ್ ಸ್ತಬ್ಧಚಿತ್ರ ಕೌತುಕ.*
*3,500 ಡ್ರೋನ್ ಶೋ, 21 ದಿನ ದೀಪಾಲಂಕಾರದ ವೈಭವ*.
ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ-2026 ಅನ್ನು ಅತ್ಯಂತ ಅದ್ಧೂರಿ, ಅರ್ಥಪೂರ್ಣ ಹಾಗೂ ಶಿಸ್ತುಬದ್ಧವಾಗಿ ಆಚರಿಸಲು ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ.
ದಸರಾ ಮಹೋತ್ಸವದ ಸಂಪೂರ್ಣ ರೂಪುರೇಷೆ, ವಿವಿಧ ಕಾರ್ಯಕ್ರಮಗಳ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಗಳ ಕುರಿತು ಮೈಸೂರು ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಘನ ಉಪಸ್ಥಿತಿಯಲ್ಲಿ ನಡೆದ ಉನ್ನತ ಮಟ್ಟದ ಪೂರ್ವಭಾವಿ ಪರಿಶೀಲನಾ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
*ವಿವಿಧ ಧರ್ಮಗುರುಗಳು, ಮಠಾಧೀಶರು ಹಾಗೂ ವಿದೇಶಿ ಗಣ್ಯರಿಗೆ ಆಹ್ವಾನ*
ದಸರಾ ಉದ್ಘಾಟನಾ ಸಮಾರಂಭಕ್ಕೆ ವಿವಿಧ ಧರ್ಮಗಳ ಧರ್ಮಗುರುಗಳು ಹಾಗೂ ಮಠಾಧೀಶರನ್ನು ಗೌರವಪೂರ್ವಕವಾಗಿ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿದೇಶಿ ರಾಯಭಾರಿಗಳು ಹಾಗೂ ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯವಾದ ಆತಿಥ್ಯ, ಶಿಷ್ಟಾಚಾರ ಮತ್ತು ಸುಗಮ ವ್ಯವಸ್ಥೆ ಕಲ್ಪಿಸಲು ವಿಶೇಷ ಶಿಷ್ಟಾಚಾರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
*ಜಂಬೂಸವಾರಿಯಲ್ಲಿ ತ್ರಿವಿಧ ಪಡೆಗಳ ಭಾಗವಹಿಸುವಿಕೆ.*
ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾರತೀಯ ತ್ರಿವಿಧ ಪಡೆಗಳ ಭಾಗವಹಿಸುವಿಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಈ ಬಾರಿ ಟಿಬೆಟ್ನ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ವಿಶೇಷ ಸ್ತಬ್ಧಚಿತ್ರ ಕೂಡ ಮೆರವಣಿಗೆಯಲ್ಲಿ ಭಾಗವಹಿಸಲಿದೆ.
ಅಂಬಾರಿ ಹೊರಲು ಐದು ಆನೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಅವುಗಳ ಪೈಕಿ ಸೂಕ್ತ ಆನೆಯನ್ನು ಆಯ್ಕೆ ಮಾಡಲಾಗುವುದು.
*ಕಲಾತಂಡಗಳ ಶಿಸ್ತುಬದ್ಧ ನಿರ್ವಹಣೆ.*
ಜಂಬೂಸವಾರಿಯಲ್ಲಿ ಭಾಗವಹಿಸುವ ಕಲಾತಂಡಗಳ ಶಿಸ್ತುಬದ್ಧ ನಿರ್ವಹಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಲಾವಿದರು ದಸರಾ ಮೆರವಣಿಗೆಗೆ ನಾಲ್ಕು ದಿನಗಳ ಮುಂಚಿತವಾಗಿ ಮೈಸೂರಿಗೆ ಆಗಮಿಸಲಿದ್ದು, ಅವರಿಗೆ ಏಕರೂಪದ ಉಡುಪು ವ್ಯವಸ್ಥೆ ಮಾಡಲಾಗುತ್ತದೆ. ಮೆರವಣಿಗೆಗೂ ಮುನ್ನ ಎರಡು ಹಂತಗಳ ಪೂರ್ವಭ್ಯಾಸವನ್ನು ಕಡ್ಡಾಯಗೊಳಿಸಲಾಗುವುದು.
ಚಲನಚಿತ್ರ ನಟ-ನಟಿಯರು ಹಾಗೂ ಪ್ರಮುಖ ಕ್ರೀಡಾಪಟುಗಳನ್ನು ಒಳಗೊಂಡ ವಿಶೇಷ ತೆರೆದ ಬಸ್ ಪ್ರದರ್ಶನವೂ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಲಿದೆ.
21 ದಿನಗಳ ವಿದ್ಯುತ್ ದೀಪಾಲಂಕಾರ.
ಸಾಂಸ್ಕೃತಿಕ ನಗರಿ ಮೈಸೂರಿನ ವೈಭವವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ನಗರಾದ್ಯಂತ ಸತತ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗುವುದು.
ಸರ್ಕಾರದ ವಿವಿಧ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಮಾದರಿಗಳನ್ನು ವಿದ್ಯುತ್ ದೀಪಾಲಂಕಾರದ ಮೂಲಕ ಪ್ರದರ್ಶಿಸಲು ನಿರ್ಧರಿಸಲಾಗಿದೆ.
ಇದರ ಜೊತೆಗೆ ಆಕಾಶದಲ್ಲಿ ರೋಮಾಂಚನ ಮೂಡಿಸುವ ಬೃಹತ್ 3,500 ಡ್ರೋನ್ಗಳ ಡ್ರೋನ್ ಶೋ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಪಂಜಿನ ಕವಾಯತು, ಯುವ ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು.
ಬನ್ನಿಮಂಟಪ ಮೈದಾನದಲ್ಲಿ ನಡೆಯಲಿರುವ ಪಂಜಿನ ಕವಾಯತು ಪ್ರದರ್ಶನವನ್ನು ಈ ಬಾರಿ ಮತ್ತಷ್ಟು ಆಕರ್ಷಕವಾಗಿ ಆಯೋಜಿಸಲಾಗುವುದು. ಸುಮಾರು 650 ಪ್ರದರ್ಶಕರನ್ನು ಒಳಗೊಂಡ ವಿಶೇಷ ನೃತ್ಯ ಕಾರ್ಯಕ್ರಮ ಪಂಜಿನ ಕವಾಯತಿನ ಪ್ರಮುಖ ಆಕರ್ಷಣೆಯಾಗಲಿದೆ.
ನಾಡಿನ ಸಾಂಪ್ರದಾಯಿಕ ವೈಭವ ಮತ್ತು ಯುವ ಪ್ರತಿಭೆಯನ್ನು ಅನಾವರಣಗೊಳಿಸುವ ಯುವ ದಸರಾ ಹಾಗೂ ಸಾಂಸ್ಕೃತಿಕ ದಸರಾ ಕಾರ್ಯಕ್ರಮಗಳನ್ನು ಭವ್ಯವಾಗಿ ಆಯೋಜಿಸಲಾಗುವುದು.
*ಕ್ರೀಡಾ ದಸರಾ*
ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಂಬಳ, ನಾಡಕುಸ್ತಿ ಸೇರಿದಂತೆ 28 ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
*ಆಹಾರ ಮೇಳ ಹಾಗೂ ಬುಡಕಟ್ಟು ಆಹಾರ ವೈವಿಧ್ಯ.*
ಆಹಾರಪ್ರಿಯರಿಗಾಗಿ ಆಯೋಜಿಸಲಾಗುವ ಆಹಾರ ಮೇಳದಲ್ಲಿ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಖಾದ್ಯಗಳ ಜೊತೆಗೆ ಕರ್ನಾಟಕದ ವಿಶಿಷ್ಟ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಖಾದ್ಯಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದು.
*ವಿಂಟೇಜ್ ವಾಹನಗಳ ಪ್ರದರ್ಶನ.*
ಮೈಸೂರಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗೆ ಪೂರಕವಾಗಿ ವಿಂಟೇಜ್ ಮತ್ತು ಕ್ಲಾಸಿಕ್ ವಾಹನಗಳ ಪ್ರದರ್ಶನ ಹಾಗೂ ರ್ಯಾಲಿ ಆಯೋಜಿಸಲಾಗುವುದು.
*ರೈತ ದಸರಾ.*
ರೈತ ದಸರಾ ಕಾರ್ಯಕ್ರಮದಲ್ಲಿ ವಿಶೇಷ ಕೃಷಿ ಕಾರ್ಯಾಗಾರ, ಕೃಷಿ ಸಂಬಂಧಿತ ವಸ್ತುಪ್ರದರ್ಶನ ಹಾಗೂ ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
*ಮಹಿಳಾ ದಸರಾ ಹಾಗೂ ಯೋಗ ದಸರಾ.*
ಮಹಿಳಾ ದಸರಾ ಅಂಗವಾಗಿ ರಾಜ್ಯಮಟ್ಟದ ಆಕರ್ಷಕ ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು.
ಯೋಗ ದಸರಾ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಯೋಗಾಭ್ಯಾಸದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಯೋಗ ಪ್ರದರ್ಶನಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
*ಸಂಚಾರ ಮತ್ತು ಭದ್ರತೆಗೆ ವಿಶೇಷ ವ್ಯವಸ್ಥೆ.*
ದಸರಾ ಸಂದರ್ಭದಲ್ಲಿ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಆಗಮಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ವಿಶೇಷ ಸಂಚಾರ ವ್ಯವಸ್ಥೆ ರೂಪಿಸಲಾಗುವುದು.
ವಿಐಪಿ ಹಾಗೂ ಗಣ್ಯರ ಭದ್ರತೆಯ ಜೊತೆಗೆ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ದಸರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸಮಗ್ರ ಭದ್ರತಾ ಯೋಜನೆ ರೂಪಿಸಲಾಗುತ್ತಿದೆ.
*ಸಭೆಯಲ್ಲಿ ಗಣ್ಯರ ಉಪಸ್ಥಿತಿ.*
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಈಶ್ವರ್ ಖಂಡ್ರೆ, ಶಾಸಕರಾದ ಶ್ರೀ ಜಿ.ಟಿ. ದೇವೇಗೌಡ, ಶ್ರೀ ಕೆ. ಹರೀಶ್ ಗೌಡ, ಶ್ರೀ ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ಶ್ರೀ ದರ್ಶನ್ ಧ್ರುವನಾರಾಯಣ್, ಶ್ರೀ ಟಿ.ಎಸ್. ಶ್ರೀವತ್ಸ, ಶ್ರೀ ರವಿಶಂಕರ್, ಶ್ರೀ ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಶ್ರೀ ಶಿವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಆಯೂಬ್ ಖಾನ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾದ ಶ್ರೀ ಹೆಚ್.ಡಿ. ಗಣೇಶ್, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಂಗಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



