Latest

*ಕಾಂತಾರ ಬಳಿಕ ರಿಷಬ್ ಶೆಟ್ಟಿ-ಹೊಂಬಾಳೆ ನಡುವೆ ಬಿರುಕು?* *ಪೋಸ್ಟ್‌ಗಳಿಂದಲೇ ಶುರುವಾಯಿತೇ ಕೋಲ್ಡ್ ವಾರ್*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದ ‘ಕಾಂತಾರ’ ಸಿನಿಮಾ ಸೃಷ್ಟಿಸಿದ ಯಶಸ್ಸಿನ ಬಳಿಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ನಡುವೆ ಎಲ್ಲವೂ ಸರಿಯಾಗಿದೆಯೇ ಎಂಬ ಚರ್ಚೆ ಇದೀಗ ಗಾಂಧಿನಗರದಲ್ಲಿ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಇಬ್ಬರ ಇತ್ತೀಚಿನ ಪೋಸ್ಟ್‌ಗಳು ಈ ಚರ್ಚೆಗೆ ಮತ್ತಷ್ಟು ಇಂಧನ ನೀಡಿವೆ.

‘ಕಾಂತಾರ’ ತೆರೆಕಂಡು ನಾಲ್ಕು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸಿನಿಮಾದೊಂದಿಗಿನ ತಮ್ಮ ಭಾವನಾತ್ಮಕ ನಂಟನ್ನು ವಿವರಿಸಿರುವ ಈ ಪೋಸ್ಟ್‌ನಲ್ಲಿ ಹೊಂಬಾಳೆ ಫಿಲಂಸ್‌ನ ಲೋಗೋ ಕಾಣಿಸದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಅಷ್ಟೇ ಅಲ್ಲದೆ, ಪೋಸ್ಟ್‌ನ ಬರಹದಲ್ಲೂ ಹೊಂಬಾಳೆ ಫಿಲಂಸ್‌ನ್ನು ಟ್ಯಾಗ್ ಮಾಡದಿರುವುದು ಚರ್ಚೆಗೆ ಕಾರಣವಾಗಿದೆ. ‘ಕಾಂತಾರ’ ಮೂಲಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ಜೋಡಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಹಿನ್ನೆಲೆಯಲ್ಲಿ ಈ ಬದಲಾವಣೆ ಬಗ್ಗೆ ನೆಟ್ಟಿಗರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಇದರ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ಕೂಡ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಆದರೆ, ಈ ಪೋಸ್ಟ್‌ನಲ್ಲೂ ರಿಷಬ್ ಶೆಟ್ಟಿ ಅವರ ಫೋಟೋ ಅಥವಾ ಹೆಸರನ್ನು ಬಳಸದೇ ಇರುವುದು ಮತ್ತಷ್ಟು ಗಮನ ಸೆಳೆದಿದೆ.

‘1 YEAR OF Divine Blockbuster #KantaraChapter1’ ಎಂಬ ಬರಹದೊಂದಿಗೆ ಬೃಹತ್ ಹುಲಿಯ ಚಿತ್ರವನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ. ರಿಷಬ್ ಶೆಟ್ಟಿ ಅವರನ್ನು ಈ ಪೋಸ್ಟ್‌ನಲ್ಲಿ ಟ್ಯಾಗ್ ಮಾಡದಿರುವುದೂ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

ಇದೀಗ ಎರಡೂ ಪೋಸ್ಟ್‌ಗಳನ್ನು ಜೊತೆಯಾಗಿ ನೋಡುತ್ತಿರುವ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು, ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ.

‘ಕಾಂತಾರ’ ಸಿನಿಮಾದ ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ಅವರ ನಟನ-ನಿರ್ದೇಶನ ಹಾಗೂ ಹೊಂಬಾಳೆ ಫಿಲಂಸ್‌ನ ನಿರ್ಮಾಣ ಎರಡಕ್ಕೂ ಪ್ರಮುಖ ಪಾತ್ರವಿತ್ತು. ಬಳಿಕ ‘ಕಾಂತಾರ ಚಾಪ್ಟರ್ 1’ ಕೂಡ ದೊಡ್ಡ ಮಟ್ಟದ ಗಮನ ಸೆಳೆದಿತ್ತು.

ಆದರೆ, ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಪರಸ್ಪರ ಉಲ್ಲೇಖ ಕಾಣಿಸದಿರುವುದು ಇದೀಗ ಚರ್ಚೆಯ ಕೇಂದ್ರವಾಗಿದೆ. ಕೆಲವರು ಇದನ್ನು ಸಾಮಾನ್ಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಆಯ್ಕೆ ಎಂದು ನೋಡುತ್ತಿದ್ದರೆ, ಮತ್ತಷ್ಟು ಮಂದಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿರಬಹುದು ಎಂದು ಚರ್ಚಿಸುತ್ತಿದ್ದಾರೆ.

ಸದ್ಯ ರಿಷಬ್ ಶೆಟ್ಟಿ ಅಥವಾ ಹೊಂಬಾಳೆ ಫಿಲಂಸ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಆಧಾರದ ಮೇಲೆ ಬಿರುಕು ಖಚಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ‘ಕಾಂತಾರ’ದಂತಹ ಬ್ಲಾಕ್‌ಬಸ್ಟರ್ ಸಿನಿಮಾದ ರೂವಾರಿಗಳು ಮತ್ತು ನಿರ್ಮಾಣ ಸಂಸ್ಥೆಯ ನಡುವಿನ ಇತ್ತೀಚಿನ ಪೋಸ್ಟ್‌ಗಳ ವಿನ್ಯಾಸವೇ ಈಗ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button