CrimeKannada NewsKarnataka NewsLatest

*ಕುಟುಂಬದ ಜೊತೆ ಸಮಯ ಕಳೆಯಲು ಕುವೈತ್‌ನಿಂದ ಬಂದ ವ್ಯಕ್ತಿ ವಿಮಾನ ನಿಲ್ದಾಣದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ವರ್ಷಗಳ ಕಾಲ ವಿದೇಶದಲ್ಲಿ ದುಡಿದು, ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವ ಆಸೆಯಿಂದ ತಾಯ್ನಾಡಿಗೆ ಮರಳಿದ್ದ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಜೆಗಾಗಿ ಸ್ವದೇಶಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಸಂಭವಿಸಿದ ಈ ದುರಂತ ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತರನ್ನು ಸುಂಟಿಕೊಪ್ಪ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ ಬಶೀರ್ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಬಶೀರ್, ದುಡಿಮೆಯ ಹಣವನ್ನು ಸುಂಟಿಕೊಪ್ಪದಲ್ಲಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕಳುಹಿಸುತ್ತಿದ್ದರು. ಇದೇ ಆದಾಯದಿಂದ ಕುಟುಂಬದ ಜೀವನ ಸಾಗುತ್ತಿತ್ತು.

ವರ್ಷಗಳ ಬಳಿಕ ರಜೆ ಸಿಕ್ಕ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಬಶೀರ್ ಕುವೈತ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಕುಟುಂಬವನ್ನು ಭೇಟಿಯಾಗುವ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ.

ಶನಿವಾರ ರಾತ್ರಿ ಸುಮಾರು 3 ಗಂಟೆಗೆ ಕುವೈತ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಬಶೀರ್‌ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಹೃದಯಾಘಾತಕ್ಕೊಳಗಾಗಿ ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದಾರೆ. ಸದ್ಯ ಮೃತದೇಹವನ್ನು ಬೆಂಗಳೂರಿನಲ್ಲೇ ಇರಿಸಲಾಗಿದ್ದು, ಕುಟುಂಬಸ್ಥರು ಬಂದ ಬಳಿಕ ಸುಂಟಿಕೊಪ್ಪಕ್ಕೆ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ.

ಮೃತದೇಹವನ್ನು ಸುಂಟಿಕೊಪ್ಪಕ್ಕೆ ತಂದ ಬಳಿಕ ಕುಟುಂಬಸ್ಥರು ಹಾಗೂ ಬಂಧು-ಬಳಗದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಯ ಬಳಿಕ 7ನೇ ಹೊಸಕೋಟೆಯ ಮುಸ್ಲಿಂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕುಟುಂಬದೊಂದಿಗೆ ಸಮಯ ಕಳೆಯುವ ನಿರೀಕ್ಷೆಯಲ್ಲಿ ಸ್ವದೇಶಕ್ಕೆ ಮರಳಿದ್ದ ಬಶೀರ್ ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿರುವುದು ಪತ್ನಿ, ಮಕ್ಕಳ ಹಾಗೂ ಬಂಧುಗಳ ಆಘಾತಕ್ಕೆ ಕಾರಣವಾಗಿದೆ. ಸುಂಟಿಕೊಪ್ಪದಲ್ಲೂ ಈ ಸುದ್ದಿ ದುಃಖಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button