*ಬೆಂಗಳೂರು ಟ್ರಾಫಿಕ್‌ನಲ್ಲಿ ಪರದಾಡಿದ ಎ.ಆರ್. ರೆಹಮಾನ್*: *ಕಾರಿನೊಳಗಿಂದ ಕೈಬೀಸಿದ ಸಂಗೀತ ಮಾಂತ್ರಿಕ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಿಲುಕಿಕೊಂಡಿದ್ದು, ಕಾರಿನೊಳಗಿಂದ ನಗುತ್ತಾ ಕೈಬೀಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಚ್ಚಿನ ಸಂಗೀತ ಮಾಂತ್ರಿಕನನ್ನು ಕಂಡು ವಾಹನ ಸವಾರರು ಹಾಗೂ ಸಾರ್ವಜನಿಕರು ಖುಷಿಪಟ್ಟಿದ್ದಾರೆ.
ವೈಟ್‌ಫೀಲ್ಡ್‌ನ ಕೆಟಿಪಿಒದಲ್ಲಿ ‘ದಿ ವಂಡರ್‌ಮೆಂಟ್ ಟೂರ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ಸ್ಥಳದಿಂದ ತೆರಳುತ್ತಿದ್ದ ವೇಳೆ ರೆಹಮಾನ್ ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ.
ಟ್ರಾಫಿಕ್‌ನಲ್ಲಿ ವಾಹನಗಳು ನಿಧಾನವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಕಾರಿನ ಕಿಟಕಿಯಿಂದ ಹೊರಗೆ ನೋಡಿದ ರೆಹಮಾನ್ ನಗುತ್ತಾ ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ಕ್ಷಣವನ್ನು ಗಮನಿಸಿದ ಹಲವು ಮಂದಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ರೆಹಮಾನ್ ಅವರನ್ನು ಗುರುತಿಸಿದ ಅಭಿಮಾನಿಗಳು ಕಾರಿನತ್ತ ಗಮನ ಹರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿಡಿಯೋ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗುತ್ತಿದೆ.
ವಿಶೇಷವೆಂದರೆ, ಸಾಮಾನ್ಯವಾಗಿ ಸೆಲೆಬ್ರಿಟಿಗಳು ಟ್ರಾಫಿಕ್‌ನಲ್ಲಿ ಸಿಲುಕಿದಾಗ ಅಸಹನೆ ವ್ಯಕ್ತಪಡಿಸುವ ದೃಶ್ಯಗಳು ಕಂಡುಬರುತ್ತವೆ. ಆದರೆ ರೆಹಮಾನ್ ಮಾತ್ರ ನಗುತ್ತಾ ಅಭಿಮಾನಿಗಳತ್ತ ಕೈಬೀಸಿರುವುದು ನೆಟ್ಟಿಗರ ಗಮನ ಸೆಳೆದಿದೆ. ಬೆಂಗಳೂರು ಟ್ರಾಫಿಕ್‌ನ ನಡುವೆಯೇ ನಡೆದ ಈ ಸಣ್ಣ ಭೇಟಿಯ ಕ್ಷಣ ಇದೀಗ ಅಭಿಮಾನಿಗಳಿಗೆ ವಿಶೇಷ ಅನುಭವವಾಗಿ ಪರಿಣಮಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




