Belagavi NewsKannada NewsKarnataka NewsLatest

*ಅ.10ರವರೆಗೆ ಗುಡುಗು-ಸಿಡಿಲು ಸಹಿತ ಮಳೆ; 60 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ: ಎಚ್ಚರ!*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದ್ದು, ಅಕ್ಟೋಬರ್ 10ರವರೆಗೆ ಕನಿಷ್ಠ 20 ರಾಜ್ಯಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ನೆಚ್ಚರಿಕೆ ನೀಡಿದೆ.

ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿರುವ ಹವಾಮಾನ ವ್ಯವಸ್ಥೆಗಳ ಪರಿಣಾಮ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಸಿಕ್ಕಿಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮೈ ಕೆಳಸ್ತರದಲ್ಲಿ ಚಂಡಮಾರುತದ ಸುಳಿಗಾಳಿ ರೂಪುಗೊಂಡಿದೆ. ಇದೇ ವೇಳೆ ಈಶಾನ್ಯ ಬಿಹಾರದಿಂದ ವಾಯವ್ಯ ಬಂಗಾಳಕೊಲ್ಲಿವರೆಗೆ ಟ್ರಫ್ ರೇಖೆ ವಿಸ್ತರಿಸಿದೆ.

ಮತ್ತೊಂದೆಡೆ, ಮನ್ನಾರ್ ಕೊಲ್ಲಿ ಮತ್ತು ದಕ್ಷಿಣ ತಮಿಳುನಾಡು ಕರಾವಳಿ ಭಾಗದಲ್ಲೂ ಸುಳಿಗಾಳಿ ನಿರ್ಮಾಣವಾಗಿದ್ದು, ಪೂರ್ವ-ಮಧ್ಯ ಅರಬ್ಬಿ ಸಮುದ್ರದವರೆಗೆ ಟ್ರಫ್ ರೇಖೆ ವ್ಯಾಪಿಸಿದೆ. ಈ ಹವಾಮಾನ ವ್ಯವಸ್ಥೆಗಳ ಪರಿಣಾಮ ಹಲವು ಪ್ರದೇಶಗಳಲ್ಲಿ ಗಂಟೆಗೆ 40ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಕರಾವಳಿ ಆಂಧ್ರಪ್ರದೇಶ, ರಾಯಲಸೀಮೆ ಹಾಗೂ ತೆಲಂಗಾಣದಲ್ಲೂ ಭಾರೀ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ದೆಹಲಿ-ಎನ್‌ಸಿಆರ್, ಹರಿಯಾಣ, ಪಂಜಾಬ್ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಅಕ್ಟೋಬರ್ 6ರಿಂದ 10ರವರೆಗೆ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅ.10ರವರೆಗೆ ಭಾರೀ ಗಾಳಿ, ಗುಡುಗು ಹಾಗೂ ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳಲ್ಲೂ ಮಳೆಯ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಅಸ್ಸಾಂ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದಲ್ಲಿ ಮುಂದಿನ ಕೆಲ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುಡುಗು, ಸಿಡಿಲು ಹಾಗೂ ಬಿರುಗಾಳಿ ವೇಳೆ ತೆರೆದ ಪ್ರದೇಶಗಳಲ್ಲಿ, ಮರಗಳ ಕೆಳಗೆ ಹಾಗೂ ವಿದ್ಯುತ್ ಕಂಬಗಳ ಸಮೀಪ ನಿಲ್ಲದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಇರುವುದರಿಂದ ಪ್ರಯಾಣಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button