Kannada NewsKarnataka NewsLatest

*ಗಗನಕ್ಕೇರಿದ ತರಕಾರಿ ಬೆಲೆ*: *ಟೊಮೆಟೊ, ಬೀನ್ಸ್ ಬಲು ದುಬಾರಿ, ಸೊಪ್ಪಿನ ದರವೂ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಿದೆ. ಟೊಮೆಟೊ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ದರ ದಿಢೀರ್ ಹೆಚ್ಚಳ ಕಂಡಿದೆ.

ಕಳೆದ ವಾರ ಕೆ.ಜಿ.ಗೆ 25 ರೂ. ಇದ್ದ ಟೊಮೆಟೊ ಇದೀಗ 54 ರೂ.ಗೆ ತಲುಪಿದೆ. ಬೀನ್ಸ್ ದರವೂ ಕೆ.ಜಿ.ಗೆ 70 ರೂ.ನಿಂದ 96 ರೂ.ಗೆ ಏರಿಕೆಯಾಗಿದೆ.

ಇದರ ಜೊತೆಗೆ ಬಿಳಿ ಬದನೆಕಾಯಿ, ಕ್ಯಾಪ್ಸಿಕಂ, ಗೋರಿಕಾಯಿ, ಸೌತೆಕಾಯಿ, ಮೂಲಂಗಿ ಹಾಗೂ ಬೀಟ್‌ರೂಟ್ ಬೆಲೆಯಲ್ಲೂ ಏರಿಕೆಯಾಗಿದೆ. ಕೆಲವು ಚಿಲ್ಲರೆ ವ್ಯಾಪಾರಿಗಳು ದರ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ತರಕಾರಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಮಾರುಕಟ್ಟೆ ಮೂಲಗಳಿಂದ ಲಭ್ಯವಾಗಿದೆ.

ಅಕಾಲಿಕ ಮಳೆ ಮತ್ತು ಅಧಿಕ ತಾಪಮಾನದಿಂದ ವಿವಿಧ ಪ್ರದೇಶಗಳಲ್ಲಿ ಬೆಳೆಗಳಿಗೆ ಹಾನಿಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಹಲವು ಕಡೆ ಬೆಳೆ ಹಾನಿಗೊಳಗಾಗಿರುವುದರಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೊಪ್ಪಿನ ದರವೂ ಏರಿಕೆಯಿಂದ ಹೊರತಾಗಿಲ್ಲ. ಪಾಲಕ್, ಕೊತ್ತಂಬರಿ, ಪುದೀನಾ, ಸಬ್ಬಕ್ಕಿ ಸೊಪ್ಪು ಹಾಗೂ ಗೊಂಗೂರ ಸೇರಿದಂತೆ ಹಲವು ಸೊಪ್ಪುಗಳ ಬೆಲೆ ಹೆಚ್ಚಾಗಿದೆ.

ಸಾಮಾನ್ಯವಾಗಿ 8ರಿಂದ 10 ರೂ.ಗೆ ಸಿಗುತ್ತಿದ್ದ ಒಂದು ಕಟ್ಟು ಸೊಪ್ಪಿನ ಬೆಲೆ ಇದೀಗ 25ರಿಂದ 30 ರೂ.ಗೆ ತಲುಪಿದೆ. ಪಾಲಕ್ ಸೊಪ್ಪಿನ ದರವೂ ಒಂದು ಕಟ್ಟಿಗೆ 10 ರೂ.ನಿಂದ 25 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯ ಮುನ್ಸೂಚನೆಯೂ ಇದೆ. ಹೀಗಾಗಿ ತರಕಾರಿ ಪೂರೈಕೆ ಮೇಲೆ ಮತ್ತಷ್ಟು ಪರಿಣಾಮ ಬೀರಿದರೆ ಬೆಲೆಗಳು ಇನ್ನೂ ಕೆಲಕಾಲ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಪಿಎಂಸಿ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button