*ಜನವರಿ ಮೊದಲ ವಾರದಲ್ಲೇ ಜಿಪಂ, ತಾಪಂ ಎಲೆಕ್ಷನ್?*: *ಡಿಸೆಂಬರ್‌ನಿಂದ ಚುನಾವಣಾ ಪ್ರಕ್ರಿಯೆಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಕ್ಟೋಬರ್ 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, 2027ರ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಸುವ ಬಗ್ಗೆ ಸಂಪುಟ ಒಲವು ವ್ಯಕ್ತಪಡಿಸಿದೆ.
ಸಂಪುಟದ ಚರ್ಚೆಯಂತೆ ಡಿಸೆಂಬರ್‌ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಿ, ಜನವರಿ ಮೊದಲ ವಾರದಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಆಡಳಿತಾವಧಿ ಮುಗಿದು ಹಲವು ವರ್ಷಗಳಾಗಿವೆ. 2021ರಲ್ಲಿ ನಡೆಯಬೇಕಿದ್ದ ಚುನಾವಣೆಗಳು ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಸಂಬಂಧಿತ ನ್ಯಾಯಾಲಯದ ವಿಚಾರಣೆಯಿಂದಾಗಿ ಮುಂದೂಡಲ್ಪಟ್ಟಿದ್ದವು.
ಚುನಾವಣೆಗೆ ಅಗತ್ಯ ಸಿದ್ಧತೆಗಳ ಭಾಗವಾಗಿ ರಾಜ್ಯ ಸರ್ಕಾರ ಈಗಾಗಲೇ ಮೀಸಲಾತಿ ಪ್ರಕ್ರಿಯೆ ಸೇರಿದಂತೆ ಹಲವು ಹಂತಗಳನ್ನು ಪೂರ್ಣಗೊಳಿಸಿದೆ. ಕರಡು ಅಧಿಸೂಚನೆ, ಆಕ್ಷೇಪಣೆಗಳ ಪರಿಶೀಲನೆ ಹಾಗೂ ಅಂತಿಮ ಅಧಿಸೂಚನೆ ಬಳಿಕ ಚುನಾವಣಾ ಆಯೋಗದ ಮೂಲಕ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಈ ಬಾರಿ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮತ್ತು ಮತಪೆಟ್ಟಿಗೆ ಬಳಸಲು ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿದೆ. ಚುನಾವಣೆಗೆ ಅಗತ್ಯ ಮತಪೆಟ್ಟಿಗೆಗಳ ಖರೀದಿ ಹಾಗೂ ಲೈವ್ ವೆಬ್‌ಕಾಸ್ಟಿಂಗ್‌ಗಾಗಿ ₹151.31 ಕೋಟಿ ವೆಚ್ಚಕ್ಕೂ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಚುನಾವಣೆ ವಿಳಂಬದಿಂದ ಪಂಚಾಯತ್ ರಾಜ್ ಸಂಸ್ಥೆಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಅನುದಾನ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರುತ್ತಿದೆ ಎಂಬ ವಿಚಾರ ಸರ್ಕಾರದ ಮುಂದಿದೆ. ಹೀಗಾಗಿ ಬಾಕಿ ಇರುವ ಚುನಾವಣೆಗಳನ್ನು ನಡೆಸುವತ್ತ ಸರ್ಕಾರ ವೇಗವಾಗಿ ಕ್ರಮ ಕೈಗೊಳ್ಳುತ್ತಿದೆ. ಜನವರಿ ಮೊದಲ ವಾರದ ವೇಳಾಪಟ್ಟಿ ಇನ್ನೂ ಅಂತಿಮ ಚುನಾವಣಾ ಅಧಿಸೂಚನೆಯ ರೂಪದಲ್ಲಿ ಪ್ರಕಟವಾಗಬೇಕಿದೆ. ರಾಜ್ಯ ಚುನಾವಣಾ ಆಯೋಗದ ಮುಂದಿನ ಕ್ರಮಗಳ ಬಳಿಕ ಮತದಾನದ ನಿಖರ ದಿನಾಂಕ ಸ್ಪಷ್ಟವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



