* ಮತ್ತೊಂದು ಇಲಾಖೆಯಲ್ಲಿ 800 ಕೋಟಿ ರೂ ಬೃಹತ್ ಹಗರಣ: ಹೊಸ ಬಾಂಬ್ ಸಿಡಿಸಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ*

ಪ್ರಗತಿವಾಹಿನಿ ಸುದ್ದಿ: ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 800 ಕೋಟಿ ರೂಪಾಯಿ ಹಗರಣ ನಡೆದಿದೆ. ಆರೋಗ್ಯ ತಪಾಸಣೆ ಹೆಸರಲ್ಲಿ ಲೂಟಿ ಮಾಡಲಾಗಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅರಗ ಜ್ಞಾನೇಂದ್ರ, ಇಲಾಖೆಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 3 ವರ್ಷಗಳಲ್ಲಿ 800 ಕೋಟಿ ರೂ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ನೂರಾರು ಕೋಟಿ ಹಣ ದೆಹಲಿ, ಕೇರಳಕ್ಕೆ ವರ್ಗಾವಣೆ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 27,13,000 ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಒಬ್ಬ ಕಾರ್ಮಿಕನ ಆರೋಗ್ಯ ತಪಾಸಣೆಗೆ 2,950 ರೂಪಾಯಿ ವೆಚ್ಚವಾಗಿದೆ. ಆ ಮೂಲಕ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 3 ವರ್ಷದಲ್ಲಿ 800 ಕೋಟಿ ರೂ ಹಣ ಲೂಟಿ ಆಗಿದೆ. ಎಂಟು ಏಜೆನ್ಸಿಗಳ ಮೂಲಕ ಕಾರ್ಮಿಕ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದರು.
ಹಗರಣದ ಬಗ್ಗೆ ತನಿಖೆಗೆ ಆದೇಶ ನೀಡಬೇಕು. ಪ್ರಕರಣವನ್ನು ಸಿಬಿಐ ಅಥವಾ ಇ.ಡಿ ತನಿಖೆ ನಡೆಸಬೇಕು ಹಗರಣದಲ್ಲಿ ಐಎಎಸ್ ಅಧಿಕಾರಿಗಳು ಸೇರಿ ಎಲ್ಲರೂ ಭಾಗಿಯಾಗಿದ್ದಾರೆ. ಈ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹಗರಣದ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ಗೆ ಈಗಾಗಲೇ ದೂರು ನೀಡಲಾಗಿದೆ. ಆದರೆ ಸಚಿವರು ಈ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ನೈತಿಕ ಹೊಣೆಹೊತ್ತು ಸಂತೋಷ್ ಲಾಡ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




