Film & EntertainmentKannada NewsKarnataka NewsLatest

*ಕಂಗನಾ ಹೆಸರಿನಲ್ಲಿ AI ಅಶ್ಲೀಲ ಕಂಟೆಂಟ್*: *ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟಿ*

ಪ್ರಗತಿವಾಹಿನಿ ಸುದ್ದಿ: ತಮ್ಮ ಹೆಸರಿನಲ್ಲಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಎಐ ಆಧಾರಿತ ಅಶ್ಲೀಲ ಹಾಗೂ ಸುಳ್ಳು ಕಂಟೆಂಟ್‌ಗಳನ್ನು ತಕ್ಷಣ ತೆಗೆದುಹಾಕುವಂತೆ ಕೋರಿ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಂತಹ ನಕಲಿ ಕಂಟೆಂಟ್‌ಗಳಿಂದ ವೈಯಕ್ತಿಕ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಕಂಗನಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರ ಪೀಠ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿದೆ. ಈ ವಿಚಾರದಲ್ಲಿ ಶೀಘ್ರದಲ್ಲೇ ಮಧ್ಯಂತರ ಆದೇಶ ನೀಡುವುದಾಗಿ ನ್ಯಾಯಾಲಯ ತಿಳಿಸಿದೆ.

ಕಂಗನಾ ಪರ ವಕೀಲರು, ನಟಿಯ ವಿರೋಧ ಸಾಮಾಜಿಕ ಜಾಲತಾಣಗಳಲ್ಲಿನ ಸಾಮಾನ್ಯ ಮೀಮ್ಸ್ ಅಥವಾ ವ್ಯಂಗ್ಯಚಿತ್ರಗಳ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಶ್ಲೀಲ, ಲೈಂಗಿಕ ಹಾಗೂ ನಕಲಿ ವಿಷಯಗಳ ವಿರುದ್ಧ ಮಾತ್ರ ಕಾನೂನು ರಕ್ಷಣೆ ಕೋರುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಎಐ ತಂತ್ರಜ್ಞಾನ ಬಳಸಿ ಕಂಗನಾ ಅವರದ್ದೇ ಹೇಳಿಕೆ ಎಂಬಂತೆ ಸುಳ್ಳು ವಿಷಯಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ ಎಂದು ವಕೀಲರು ವಾದಿಸಿದ್ದಾರೆ. ಇಂತಹ ಕಂಟೆಂಟ್‌ಗಳನ್ನು ತೆಗೆದುಹಾಕುವಂತೆ ಸಂಬಂಧಿಸಿದ ವೇದಿಕೆಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಹಾಗೂ ಎಐ ಆಧಾರಿತ ದುರ್ಬಳಕೆಯ ವಿರುದ್ಧ ಕಂಗನಾ ಹೈಕೋರ್ಟ್ ಮೊರೆ ಹೋಗಿರುವುದು ಮೊದಲ ಪ್ರಕರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾ ತಾರೆಯರು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕ ವ್ಯಕ್ತಿಗಳು ಇದೇ ರೀತಿಯ ಕಾನೂನು ಕ್ರಮ ಕೈಗೊಂಡಿದ್ದಾರೆ.

ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್, ಪಾಡ್‌ಕಾಸ್ಟರ್ ರಾಜ್ ಶಮಾನಿ ಹಾಗೂ ಕ್ರಿಕೆಟಿಗ ಅಭಿಷೇಕ್ ಶರ್ಮಾ ಸೇರಿದಂತೆ ಹಲವು ಗಣ್ಯರು ತಮ್ಮ ಹೆಸರು, ಚಿತ್ರ, ಧ್ವನಿ ಅಥವಾ ವ್ಯಕ್ತಿತ್ವದ ಅಕ್ರಮ ಬಳಕೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ಪ್ರಕರಣಗಳಲ್ಲಿ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶಗಳ ಮೂಲಕ ಕೆಲವು ಸಂದರ್ಭಗಳಲ್ಲಿ ಗಣ್ಯರ ಚಿತ್ರ, ಧ್ವನಿ ಹಾಗೂ ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ಬಳಸುವುದಕ್ಕೆ ನಿರ್ಬಂಧ ವಿಧಿಸಿದೆ. ಕಂಗನಾ ಪ್ರಕರಣದಲ್ಲೂ ನ್ಯಾಯಾಲಯದ ಮುಂದಿನ ಆದೇಶದ ಮೇಲೆ ಇದೀಗ ಗಮನ ನೆಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button