
ಪ್ರಗತಿವಾಹಿನಿ ಸುದ್ದಿ: ಕ್ಯಾನ್ಸರ್ ಔಷಧಗಳ ಬೆಲೆ ಮತ್ತು ಔಷಧ ಲಾಭಕೋರತನ ವಿರುದ್ಧ ಕರ್ನಾಟಕದ ಧ್ವನಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಲಾಭಾಂಶವನ್ನು ಅಸಲು ದರದ ಗರಿಷ್ಠ ಶೇ. 30ಕ್ಕೆ ಮಿತಿಗೊಳಿಸಿದೆ.
ಕ್ಯಾನ್ಸರ್ ಔಷಧಗಳ ಉತ್ಪಾದನಾ ವೆಚ್ಚಕ್ಕೂ ಮಾರಾಟ ದರಕ್ಕೂ ದೊಡ್ಡ ವ್ಯತ್ಯಾಸವಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ವರದಿ ನೀಡಿತ್ತು. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ಬಗ್ಗೆ ಧ್ವನಿ ಎತ್ತಿದ್ದರು. ಕ್ಯಾನ್ಸರ್ ಔಷಧಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಹಲವು ಉದಾಹರಣೆಗಳನ್ನು ನೀಡಿ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.
ಔಷಧಗಳ ಉತ್ಪಾದನಾ ವೆಚ್ಚ ಮತ್ತು ಮಾರಾಟ ದರದ ನಡುವಿನ ವ್ಯತ್ಯಾಸವನ್ನು ಖಾದರ್ ಬಹಿರಂಗಪಡಿಸಿದ್ದರು. 86 ರೂ. ಔಷಧವನ್ನು 4,528 ರೂ.ಗೆ, 160ರೂ. ಔಷಧವನ್ನು 7,110 ರೂ. ಹಾಗೂ 118 ರೂ. ಔಷಧವನ್ನು 4,416 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು. ಕ್ಯಾನ್ಸರ್ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಮೇಲೆ 10ರಿಂದ 52 ಪಟ್ಟು ಹೆಚ್ಚಿನ ದರ ವಿಧಿಸಲಾಗುತ್ತಿದೆ ಎಂದಿದ್ದರು. ಬೆಲೆ ವ್ಯತ್ಯಾಸದಿಂದ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಔಷಧಗಳ ಬೆಲೆ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) ಹೆಚ್ಚು ಔಷಧಗಳ ಬೆಲೆ ನಿಯಂತ್ರಿಸುವಂತೆ ಅಧಿಕಾರ ನೀಡಬೇಕು ಎಂಬುದು ಸಚಿವರ ಪ್ರಮುಖ ಬೇಡಿಕೆಯಾಗಿತ್ತು. ಇದೀಗ ಕೇಂದ್ರ ಸರ್ಕಾಅರ ಕ್ಯಾನ್ಸರ್ ಔಷಧಗಳ ದರವನ್ನು ಶೇ. 30ಕ್ಕೆ ಮಿತಿಗೊಳಿಸಿದೆ.
ಕೇಂದ್ರ ಸರ್ಕಾರ ಅಸಲು ವೆಚ್ಚದ ಮೇಲೆ ಗರಿಷ್ಠ ಶೇ. 30ರಷ್ಟು ಲಾಭಾಂಶಕ್ಕೆ ಮಿತಿ ವಿಧಿಸಿರುವ ಕ್ರಮ ಜಾರಿಗೆ ಬಂದರೆ, ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ನೆರವಾಗುವ ನಿರೀಕ್ಷೆಯಿದೆ. ಇದರಿಂದ ರೋಗಿಗಳ ಚಿಕಿತ್ಸಾ ವೆಚ್ಚ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




