
ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪ್ರೊಫೆಸರ್, ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಬಿಮೋಲ್ ಅಕೋಯಿಜಮ್ ಮಣಿಪುರದ ಕಾಂಗ್ರೆಸ್ ಲೋಕಸಭಾ ಸಂಸದರೂ ಆಗಿದ್ದು, ವಿಶ್ವವಿದ್ಯಾಲಯದ ಆಂತರಿಕ ಸಮಿತಿ ವರದಿಯ ಆಧಾರದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ಅವರು ಸಹಿ ಹಾಕಿರುವ ಆದೇಶದ ಪ್ರತಿಯಲ್ಲಿ, ಪ್ರೊ. ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್ನ ಸೆಂಟರ್ ಫಾರ್ ದಿ ಸ್ಟಡಿ ಆಫ್ ಸೋಶಿಯಲ್ ಸಿಸ್ಟಮ್ಸ್ಗೆ ಸೇರಿದ ಅಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದ ನಂತರ, ಅವರ ವಿರುದ್ಧ ಆಂತರಿಕ ತನಿಖೆಯನ್ನು ನಡೆಸಲಾಗಿತ್ತು. ಆಂತರಿಕ ಸಮಿತಿಯ ವರದಿಯ ಆಧಾರದ ಮೇಲೆ, ಪ್ರೊ. ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರನ್ನು ವಿಶ್ವವಿದ್ಯಾಲಯದ ಸೇವೆಯಿಂದ ವಜಾಗೊಳಿಸುವ ಶಿಕ್ಷೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಅಂಕಗಳಿಗಾಗಿ ಲೈಂಗಿಕ ಬೇಡಿಕೆಗಳನ್ನು ಮಂಡಿಸಿದ ಗಂಭೀರ ಆರೋಪ, ಸಭೆ-ಸಮಾರಂಭಗಳಲ್ಲಿನ ಅನುಚಿತ ವರ್ತನೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಸಂದರ್ಭದ ಅಸಂಬದ್ಧ ನಡವಳಿಕೆಗಳು, ವಿದ್ಯಾರ್ಥಿನಿಯರನ್ನು ಆಹ್ವಾನಿಸಿ ಅಸಮರ್ಪಕ ಲೈಂಗಿಕ ವರ್ತನೆ ತೋರುವುದು ಸೇರಿದಂತೆ ಪ್ರೊಫೆಸರ್ ವಿರುದ್ಧ ಹಲವ್ ಆರೋಪಗಳಿದ್ದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




