*ಅಶೋಕ್ ಮಾತ್ರವಲ್ಲ, ಹಲವು ಕಾರ್ಪೋರೇಟರ್, ಪೊಲೀಸರ ಸಿ.ಡಿ ಇದೆ*: ವೆಂಕಟೇಶ್ ಸ್ಫೋಟಕ ಹೇಳಿಕೆ!*

ಪ್ರಗತಿವಾಹಿನಿ ಸುದ್ದಿ: ಆರ್ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಅವರ ಮಾಜಿ ಆಪ್ತ ಜಿ.ಕೆ. ವೆಂಕಟೇಶ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಜಿ ಸಚಿವ ಆರ್. ಅಶೋಕ್ ಅವರಿಗೆ ಸಂಬಂಧಿಸಿದ ಸಿಡಿ ಇದೆ ಎಂದು ಹೇಳಿಕೊಂಡು ಮುನಿರತ್ನ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಮಂಗಳವಾರವಷ್ಟೇ ಬಿಜೆಪಿ ತೊರೆದಿರುವ ಅವರು, ಮುನಿರತ್ನ ಅವರ ಬಳಿ ಹಲವು ರಾಜಕಾರಣಿಗಳು ಮತ್ತು ಕಾರ್ಪೊರೇಟರ್ಗಳಿಗೆ ಸಂಬಂಧಿಸಿದ ವಿಡಿಯೋಗಳಿದ್ದವು ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಕೆ. ವೆಂಕಟೇಶ್, ಮುನಿರತ್ನ ಅವರು ಆರ್. ಅಶೋಕ್ ಅವರಿಗೆ ಸಂಬಂಧಿಸಿದ ಸಿಡಿಯನ್ನು ಇಟ್ಟುಕೊಂಡಿದ್ದಾರೆ ಎಂಬ ವಿಚಾರದ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಹಿಂದೆ ಮುನಿರತ್ನ ಅವರು ಅಶೋಕ್ಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಯತ್ನಿಸಿದ್ದರು ಎಂಬ ಆರೋಪದ ಕುರಿತು ಸುದ್ದಿಗಳು ಹರಿದಾಡಿದ್ದವು. ಈ ವಿಚಾರದಲ್ಲಿ ಅಶೋಕ್ ಮೌನವಾಗಿರುವುದೇಕೆ ಮತ್ತು ಯಾವುದೇ ಕ್ರಮ ಕೈಗೊಳ್ಳದಿರುವುದೇಕೆ ಎಂದು ವೆಂಕಟೇಶ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಯಾರಾದರೂ ಮಾತನಾಡಿದರೆ ತಮ್ಮ ಬಳಿ ಸಿಡಿ ಇದೆ ಎಂದು ಮುನಿರತ್ನ ಹೇಳುತ್ತಿದ್ದರು. ತಮಗೂ ಆ ಸಿಡಿಯನ್ನು ತೋರಿಸಿದ್ದರು ಎಂದು ವೆಂಕಟೇಶ್ ಪ್ರತಿಪಾದಿಸಿದ್ದಾರೆ. ಮುನಿರತ್ನ ಅವರ ಪರವಾಗಿದ್ದ ಕಾರಣಕ್ಕೆ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ತಮ್ಮನ್ನು ವಿಚಾರಣೆಗೆ ಕರೆದಿದ್ದರು ಎಂದೂ ಅವರು ಹೇಳಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಹಲವು ಕಾರ್ಪೊರೇಟರ್ಗಳಿಗೆ ಸಂಬಂಧಿಸಿದ ಸಿಡಿಗಳಿದ್ದುದನ್ನು ತಾವು ಕಣ್ಣಾರೆ ನೋಡಿದ್ದಾಗಿ ವೆಂಕಟೇಶ್ ಆರೋಪಿಸಿದ್ದಾರೆ. ನ್ಯಾಯಾಧೀಶರ ಮುಂದೆ ನೀಡಬೇಕಿದ್ದ ಹೇಳಿಕೆಯನ್ನೂ ವಿಡಿಯೋ ರೂಪದಲ್ಲಿ ದಾಖಲಿಸಲಾಗಿತ್ತು ಎಂದು ಹೇಳಿರುವ ಅವರು, ಪೊಲೀಸರು ತೋರಿಸಿದ ವಿಡಿಯೋಗಳನ್ನು ನೋಡಿ ತಮಗೆ ನೋವಾಯಿತು ಎಂದು ತಿಳಿಸಿದ್ದಾರೆ.
“ನಾನೂ ಒಬ್ಬ ಪೊಲೀಸ್ ಅಧಿಕಾರಿಯ ಮಗ. ಪೊಲೀಸರ ವಿಡಿಯೋಗಳನ್ನು ಹೀಗೆ ದಾಖಲಿಸಿರುವುದನ್ನು ನೋಡಿ ಬೇಸರವಾಯಿತು” ಎಂಬರ್ಥದಲ್ಲಿ ಮಾತನಾಡಿದ ವೆಂಕಟೇಶ್, ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ತೊರೆದಿದ್ದಾಗಿ ಹೇಳಿದ್ದಾರೆ. ಮುಂದಿನ ರಾಜಕೀಯ ನಡೆ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ಹಿತೈಷಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


