*ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ: ಮಹಿಳೆ ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಬಳಿ ಚಾಕುವಿನಿಂದ ದಾಳಿ ನಡೆಸಲು ಮಹಿಳೆಯೊಬ್ಬರು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
ಈ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರು ಆತಂಕ ವ್ಯಕ್ತಪಡಿಸಿದ್ದು, ಘಟನೆಯ ಹಿಂದೆ ರಾಜಕೀಯ ಪಿತೂರಿ ಇದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಕೊಲ್ಕತ್ತಾದ ಕಾಳಿಘಾಟ್ನಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸದ ಸಮೀಪ ಈ ಘಟನೆ ನಡೆದಿದೆ ಎಂದು ಟಿಎಂಸಿ ನಾಯಕರು ತಿಳಿಸಿದ್ದಾರೆ.
ದುರ್ಗಾ ಪೂಜೆಯ ಪೆಂಡಾಲ್ ಉದ್ಘಾಟನೆಗಾಗಿ ಮಮತಾ ಬ್ಯಾನರ್ಜಿ ಮನೆಯಿಂದ ಹೊರಬಂದಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಭದ್ರತಾ ವಲಯ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಮಹಿಳೆ ತಾನು ಮಮತಾ ಬ್ಯಾನರ್ಜಿ ಅವರ ಸೋದರ ಸೊಸೆ ಎಂದು ಹೇಳಿಕೊಂಡು ಒಳನುಗ್ಗಲು ಯತ್ನಿಸಿದ್ದಾಳೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಟಿಎಂಸಿ ಸಂಸದೆ ಡೋಲಾ ಸೇನ್ ಸೇರಿದಂತೆ ಇತರರು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಮಹಿಳೆ ಅಸಭ್ಯವಾಗಿ ವರ್ತಿಸಿ, ನಿಂದಿಸಲು ಆರಂಭಿಸಿದ್ದಾಳೆ. ಬಳಿಕ ಆಕೆಯ ಬಳಿ ಚಾಕು ಇರುವುದು ಪತ್ತೆಯಾಗಿದೆ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.
ಮಹಿಳೆ ಮಾದಕ ವ್ಯಸನಿಯಾಗಿದ್ದು, ಸಿವಿಕ್ ಸ್ವಯಂಸೇವಕಿಯಾಗಿದ್ದಾಳೆ ಎಂಬ ಆರೋಪವನ್ನೂ ಟಿಎಂಸಿ ಮಾಡಿದೆ. ಆದರೆ, ಈ ಆರೋಪಗಳ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಮಮತಾ ಬ್ಯಾನರ್ಜಿ ಅವರಿಗೆ Z+ ಭದ್ರತೆ ಇರುವುದಾಗಿ ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ನಿವಾಸದ ಬಳಿಯೇ ಇಂತಹ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಟಿಎಂಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವೇಳೆ ಮಹಿಳೆಯನ್ನು ಟಿಎಂಸಿ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾಳಿಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಹಿಳೆಯ ಹಿನ್ನೆಲೆ ಹಾಗೂ ಆಕೆಯ ಉದ್ದೇಶದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಮೇಲಿನ ದಾಳಿಗೆ ಯತ್ನ ನಡೆದಿದೆ ಎಂಬ ಆರೋಪದ ಸತ್ಯಾಸತ್ಯತೆ ಮತ್ತು ಘಟನೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


