Kannada NewsKarnataka NewsLatestWorld

*ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ*: *ರೋಬೋಟ್ ವಶಕ್ಕೆ ಪಡೆದ ಪೊಲೀಸರು!*

ಪ್ರಗತಿವಾಹಿನಿ ಸುದ್ದಿ: 16 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ರೋಬೋಟ್ ಅಸಭ್ಯವಾಗಿ ವರ್ತಿಸಿದೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿಯ ದೇಹವನ್ನು ಮುಟ್ಟಿ ಅಶ್ಲೀಲ ಚಲನೆಗಳನ್ನು ಮಾಡಿದೆ ಎನ್ನಲಾದ ಈ ಘಟನೆಯನ್ನು ಇಬ್ಬರು ಯುವಕರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಿರುವ ಆರೋಪವೂ ಇದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ರೋಬೋಟ್ ಮತ್ತು ಶಂಕಿತರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಕ್ಟೋಬರ್ 11ರ ರಾತ್ರಿ ಸುಮಾರು 11.45ರ ಸುಮಾರಿಗೆ ಜರ್ಮನಿಯ ಕಲೋನ್ ನಗರದ ಹೋಹೆನ್‌ಜೊಲ್ಲರ್ನ್‌ರಿಂಗ್ ಪ್ರದೇಶದ ಫಾಸ್ಟ್‌ಫುಡ್ ರೆಸ್ಟೋರೆಂಟ್‌ವೊಂದರ ಹೊರಗೆ ಘಟನೆ ನಡೆದಿದೆ. ತನ್ನ ಸ್ನೇಹಿತೆಯರೊಂದಿಗೆ ಇದ್ದ 16 ವರ್ಷದ ಬಾಲಕಿಯ ಬಳಿ ಸುಮಾರು 1.2 ಮೀಟರ್ ಎತ್ತರದ ಕೆಂಪು ಮತ್ತು ಚಿನ್ನದ ಬಣ್ಣದ ರೋಬೋಟ್ ಹಿಂಬದಿಯಿಂದ ಬಂದು, ಆಕೆಯ ದೇಹದ ಹಿಂಭಾಗವನ್ನು ಮುಟ್ಟಿ ಅಸಭ್ಯ ಚಲನೆಗಳನ್ನು ಮಾಡಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.

ಈ ಘಟನೆಯನ್ನು ರೋಬೋಟ್‌ನ 16 ವರ್ಷದ ಮಾಲೀಕ ಮತ್ತು ಆತನ 19 ವರ್ಷದ ಸ್ನೇಹಿತ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಿದ್ದರು ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ, ಶಂಕಿತರು ಬಳಸಿದ್ದ ವೋಕ್ಸ್‌ವ್ಯಾಗನ್ ಕಾರಿನ ಡಿಕ್ಕಿಯಲ್ಲಿ ರೋಬೋಟ್ ಪತ್ತೆಯಾಗಿದೆ.

ಪೊಲೀಸರು ರೋಬೋಟ್ ಮತ್ತು ಇಬ್ಬರು ಶಂಕಿತರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರೋಬೋಟ್‌ನ ಚಲನವಲನಗಳು ಮೊದಲೇ ಪ್ರೋಗ್ರಾಮ್ ಮಾಡಲಾಗಿತ್ತೇ ಅಥವಾ ಯುವಕರು ದೂರದಿಂದಲೇ ಅದನ್ನು ನಿಯಂತ್ರಿಸಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸುವಂತೆ ಮಾಡಿದ್ದರೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಇಬ್ಬರು ಯುವಕರ ವಿರುದ್ಧ ಇನ್ನೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಲೈಂಗಿಕ ಉದ್ದೇಶದ ಅವಮಾನಕ್ಕೆ ಸಂಬಂಧಿಸಿದ ಶಂಕೆಯಡಿ ಕಲೋನ್ ಕ್ರಿಮಿನಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೋಬೋಟ್ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿತ್ತೇ ಅಥವಾ ಉದ್ದೇಶಪೂರ್ವಕವಾಗಿ ನಿಯಂತ್ರಿಸಲಾಗಿತ್ತೇ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button