*ಜೈಲಿನಲ್ಲಿ ಪವಿತ್ರಾ ಗೌಡಗೆ ಸಹ ಕೈದಿಗಳ ಕಾಟ*: *ಬ್ಯಾರಕ್ ಬದಲಿಸಲು ಮತ್ತೆ ಕೋರ್ಟ್ ಮೊರೆ!*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರಿಗೆ ಸಹ ಕೈದಿಗಳಿಂದ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮಹಿಳಾ ಬ್ಯಾರಕ್ನಲ್ಲಿ ನೈಜೀರಿಯಾ ಮೂಲದ ಮಹಿಳಾ ಕೈದಿಗಳ ಕಿರುಕುಳದಿಂದ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪವಿತ್ರಾ ಗೌಡ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಬ್ಯಾರಕ್ ಬದಲಾಯಿಸುವಂತೆ ಈ ಹಿಂದೆಯೂ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ, ಜೈಲಾಧಿಕಾರಿಗಳಿಂದ ವರದಿ ಕೇಳಲಾಗಿದೆ.
ಸದ್ಯ ಸುಮಾರು 30 ಮಹಿಳಾ ಕೈದಿಗಳಿರುವ ಬ್ಯಾರಕ್ನಲ್ಲಿ ಪವಿತ್ರಾ ಗೌಡ ಇದ್ದಾರೆ. ಈ ಪೈಕಿ ನಾಲ್ಕರಿಂದ ಐದು ಮಂದಿ ವಿದೇಶಿ ಪ್ರಜೆಗಳಿದ್ದು, ಅವರಿಂದ ತೊಂದರೆಯಾಗುತ್ತಿದೆ ಎಂದು ಪವಿತ್ರಾ ಗೌಡ ತಿಳಿಸಿದ್ದಾರೆ. ಸಹ ಕೈದಿಗಳು ಮಧ್ಯರಾತ್ರಿಯವರೆಗೂ ನಿದ್ದೆ ಮಾಡಲು ಬಿಡುವುದಿಲ್ಲ. ತಮ್ಮ ಬಟ್ಟೆ ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಬಳಸಿಕೊಳ್ಳುತ್ತಾರೆ. ಇದನ್ನು ಪ್ರಶ್ನಿಸಿದರೆ ಗಲಾಟೆ ಮಾಡುತ್ತಾರೆ ಎಂದು ಆರೋಪಿಸಿರುವುದಾಗಿ ಪವಿತ್ರಾ ಗೌಡ ಪರ ವಕೀಲರು ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ನಡೆದ ನ್ಯಾಯಾಲಯದ ವಿಚಾರಣೆಯಲ್ಲಿಯೂ ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಅವರು ಬ್ಯಾರಕ್ ಬದಲಿಸುವಂತೆ ಮನವಿ ಮಾಡಿದ್ದಾರೆ. ಸಹ ಕೈದಿಗಳ ನಡುವಿನ ಸಮಸ್ಯೆಯಿಂದ ಜೈಲಿನಲ್ಲಿ ದಿನ ಕಳೆಯುವುದೇ ಕಷ್ಟವಾಗುತ್ತಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಈ ಹಿಂದೆ ಬ್ಯಾರಕ್ ಬದಲಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಇದ್ದರೂ ಜೈಲಾಧಿಕಾರಿಗಳು ಅದನ್ನು ಏಕೆ ಜಾರಿಗೊಳಿಸಿಲ್ಲ ಎಂಬ ಪ್ರಶ್ನೆ ಈಗ ಎದುರಾಗಿದೆ. ಈ ಕುರಿತು ಕಾರಣ ತಿಳಿಸುವಂತೆ ನ್ಯಾಯಾಲಯ ಜೈಲಾಧಿಕಾರಿಗಳಿಂದ ವರದಿ ಕೇಳಿದೆ ಎಂದು ವರದಿಯಾಗಿದೆ.
ಇದಲ್ಲದೆ, ಸಹ ಕೈದಿಗಳಿಂದ ಉಂಟಾಗಿರುವ ತೊಂದರೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಪವಿತ್ರಾ ಗೌಡ ಪರ ವಕೀಲರು ವೈದ್ಯಕೀಯ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮಹಿಳಾ ಬ್ಯಾರಕ್ಗಳ ಪರಿಸ್ಥಿತಿಯನ್ನು ಪರಿಶೀಲಿಸುವಂತೆ 59ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಿಗೂ ಮನವಿ ಮಾಡಲಾಗಿದೆ.
ಜೈಲಿನಲ್ಲಿ ಪವಿತ್ರಾ ಗೌಡ ಅವರಿಗೆ ನಿಜವಾಗಿಯೂ ಯಾವ ರೀತಿಯ ತೊಂದರೆಗಳು ಎದುರಾಗಿವೆ ಮತ್ತು ಬ್ಯಾರಕ್ ಬದಲಾವಣೆ ಅಗತ್ಯವಿದೆಯೇ ಎಂಬುದು ಜೈಲಾಧಿಕಾರಿಗಳ ವರದಿಯಿಂದ ಸ್ಪಷ್ಟವಾಗಬೇಕಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ ಮುಂದಿನ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಈಗ ಗಮನ ಕೇಂದ್ರೀಕೃತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


