*ಕಾಂಗ್ರೆಸ್ನಿಂದ ಆಹ್ವಾನ ಬಂದಿದೆ, ಬಿಜೆಪಿ ಕರೆದರೂ ಯೋಚಿಸುತ್ತೇನೆ*: ರಘುಪತಿ ಭಟ್!

ಪ್ರಗತಿವಾಹಿನಿ ಸುದ್ದಿ: ಉಡುಪಿ ರಾಜಕೀಯದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಅವರ ಮುಂದಿನ ನಡೆ ಕುರಿತು ಚರ್ಚೆ ಜೋರಾಗಿದೆ. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ದೀರ್ಘಕಾಲ ಗುರುತಿಸಿಕೊಂಡಿರುವ ರಘುಪತಿ ಭಟ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ. ಆದರೆ, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ರಘುಪತಿ ಭಟ್ ತಿಳಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆಯ ಕುರಿತು ಯೋಚನೆ ನಡೆಸುತ್ತಿದ್ದೇನೆ. ನನ್ನ ಬೆಂಬಲಿಗರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ತೀರ್ಮಾನ ಕೈಗೊಳ್ಳುತ್ತೇನೆ. ಬಿಜೆಪಿ ಕಡೆಯಿಂದಲೂ ಆಹ್ವಾನ ಬರುವ ನಿರೀಕ್ಷೆಯಿದೆ. ಅಲ್ಲಿಂದ ಆಹ್ವಾನ ಬಂದರೂ ಅದರ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ.
ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದಿರುವ ರಘುಪತಿ ಭಟ್, ಬಿಜೆಪಿಯ ಯುವ ಮೋರ್ಚಾ ಜಿಲ್ಲಾ ಘಟಕದಲ್ಲಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮೂರು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಹೀಗಾಗಿ, ಪಕ್ಷ ಬದಲಿಸುವಂತಹ ನಿರ್ಧಾರವನ್ನು ಏಕಾಏಕಿ ಕೈಗೊಳ್ಳಲು ಸಾಧ್ಯವಿಲ್ಲ. ತಮ್ಮ ಮನಸ್ಸಿಗೂ ಅದು ಒಪ್ಪುವುದಿಲ್ಲ. ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ, ಅದನ್ನು ಪಕ್ಷದ ನಿರ್ಧಾರವೆಂದು ಒಪ್ಪಿಕೊಂಡು ಉಡುಪಿ ಕ್ಷೇತ್ರದ ಅಭ್ಯರ್ಥಿ ಯಶಪಾಲ್ ಸುವರ್ಣ ಅವರ ಪರವಾಗಿ ಪ್ರಚಾರ ಮಾಡಿದ್ದಾಗಿ ರಘುಪತಿ ಭಟ್ ಹೇಳಿದ್ದಾರೆ. ಯಶಪಾಲ್ ಸುವರ್ಣ ಗೆಲುವಿನಲ್ಲಿ ತಮ್ಮ ಪರಿಶ್ರಮವೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಚುನಾವಣೆಯಲ್ಲಿ ಗೆದ್ದ ಬಳಿಕ ಯಶಪಾಲ್ ಸುವರ್ಣ ನಡೆದುಕೊಂಡ ರೀತಿಯಿಂದ ತಮಗೆ ನೋವಾಗಿದೆ ಎಂದು ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಗೌರವವನ್ನೂ ನೀಡಲಿಲ್ಲ ಎಂಬ ಬೇಸರವನ್ನು ಹೊರಹಾಕಿದ್ದಾರೆ.
ಒಟ್ಟಿನಲ್ಲಿ, ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದನ್ನು ಒಪ್ಪಿಕೊಂಡಿರುವ ರಘುಪತಿ ಭಟ್, ಬಿಜೆಪಿ ಬಗ್ಗೆಯೂ ತಮ್ಮ ಆಯ್ಕೆಗಳನ್ನು ಮುಕ್ತವಾಗಿಟ್ಟಿದ್ದಾರೆ. ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಪ್ರಕಟಿಸಲಿದ್ದು, 2028ರ ಚುನಾವಣೆಗೆ ಸ್ಪರ್ಧಿಸುವ ನಿಲುವನ್ನು ಮಾತ್ರ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಉಡುಪಿ ರಾಜಕೀಯದಲ್ಲಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




