Film & EntertainmentKarnataka NewsLatest

*‘ದಮ್ಮು ತಾಕತ್ತಿದ್ರೆ ಮೀಸಲಾತಿ ಹೋರಾಟಕ್ಕೆ ಬನ್ನಿ’*: *ಸುದೀಪ್‌ಗೆ ಉಗ್ರಪ್ಪ ಸವಾಲು!*

ಪ್ರಗತಿವಾಹಿನಿ ಸುದ್ದಿ: ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ನಾಡಪ್ರಭು ರಾಜವೀರ ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಘೋಷಣೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಗಳು ‘ಕಿಚ್ಚ, ಕಿಚ್ಚ’ ಎಂದು ಕೂಗಿದ್ದರಿಂದ ಅಸಮಾಧಾನಗೊಂಡ ಅವರು, ವೇದಿಕೆಯಿಂದಲೇ ಸುದೀಪ್‌ಗೆ ಸವಾಲು ಹಾಕಿದ್ದಾರೆ. ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಬರುವಂತೆ ಆಗ್ರಹಿಸಿರುವ ಉಗ್ರಪ್ಪ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿವೆ.

ಮಂಗಳವಾರ ನಡೆದ ಜಯಂತೋತ್ಸವದಲ್ಲಿ ಭಾಗವಹಿಸಲು ನಟ ಕಿಚ್ಚ ಸುದೀಪ್ ಆಗಮಿಸಿದ್ದರು. ಈ ವೇಳೆ ಅವರ ಅಭಿಮಾನಿಗಳು ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಉಗ್ರಪ್ಪ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲೂ ಕೇಕೆ ಮತ್ತು ಘೋಷಣೆಗಳು ಮುಂದುವರಿದಿದ್ದರಿಂದ ಕಾರ್ಯಕ್ರಮದ ಗಂಭೀರತೆಗೆ ಧಕ್ಕೆಯಾಯಿತು ಎಂಬ ಅಸಮಾಧಾನ ವ್ಯಕ್ತವಾಯಿತು.

ಇದರಿಂದ ಕೋಪಗೊಂಡ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವೇದಿಕೆಯಿಂದಲೇ ಅಭಿಮಾನಿಗಳ ವರ್ತನೆಯನ್ನು ಖಂಡಿಸಿದರು. “ನಾಯಕರು ಎಂದು ಹೇಳಿಕೊಂಡು ಕೇಕೆ ಹಾಕಿಸಿಕೊಳ್ಳುವುದಲ್ಲ. ನಾಯಕರ ಮಗನಾಗಿದ್ದರೆ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್. ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಬನ್ನಿ. ಶೇ. 56ರಷ್ಟು ಮೀಸಲಾತಿ ಬೇಕು. ಅದಕ್ಕಾಗಿ ದಮ್ಮು, ತಾಕತ್ತಿದ್ದರೆ ಹೋರಾಡಬೇಕು” ಎಂದು ಸವಾಲು ಹಾಕಿದರು.

ಮದಕರಿ ನಾಯಕ ಜಯಂತೋತ್ಸವದಂತಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮದಲ್ಲಿ ನಡೆದ ಈ ಘಟನೆ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸುದೀಪ್ ಅಭಿಮಾನಿಗಳ ಘೋಷಣೆ ಮತ್ತು ಉಗ್ರಪ್ಪ ಅವರ ತೀಕ್ಷ್ಣ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button