Kannada NewsKarnataka NewsLatest

*ಸುಪ್ರೀಂ ಕೋರ್ಟ್‌ನಲ್ಲಿ ತಪ್ಪು ಮಾಹಿತಿ*: *ಮುಖ್ಯ ಕಾರ್ಯದರ್ಶಿಗೆ ಡಿಜಿಪಿ ಅಲೋಕ್ ಕುಮಾರ್ ಪತ್ರ!*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ಹೆಸರನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಮಂಡಿಸಿದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಡಿಜಿಪಿ ಅಲೋಕ್ ಕುಮಾರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಐದು ಪುಟಗಳಿಗೂ ಹೆಚ್ಚು ಉದ್ದದ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ವಿರುದ್ಧದ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ತಲುಪಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ತಮ್ಮ ವಿರುದ್ಧ ಪ್ರಸ್ತುತ ಯಾವುದೇ ಸಿಬಿಐ ತನಿಖೆ ಅಥವಾ ಇಲಾಖಾ ವಿಚಾರಣೆ ಬಾಕಿ ಇಲ್ಲ ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ಸ್ಪಷ್ಟಪಡಿಸಿರುವ ಅಲೋಕ್ ಕುಮಾರ್, ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅವಧಿಯ ಫೋನ್ ಟ್ಯಾಪಿಂಗ್ ಆರೋಪದ ಕುರಿತು ಸಿಬಿಐ ಈಗಾಗಲೇ ‘ಬಿ-ರಿಪೋರ್ಟ್’ ಸಲ್ಲಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 2024ರ ಫೆಬ್ರವರಿ 13ರಂದು ಸಿಬಿಐ ವಿಶೇಷ ನ್ಯಾಯಾಲಯ ಈ ವರದಿಯನ್ನು ಅಂಗೀಕರಿಸಿದೆ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು 2023ರಲ್ಲೇ ಅಂದಿನ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ಶೋಕಾಸ್ ನೋಟಿಸ್ ಹಾಗೂ ಚಾರ್ಜ್‌ಶೀಟ್ ಅನ್ನು 2025ರ ಅಕ್ಟೋಬರ್‌ನಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿದೆ. ವೃತ್ತಿಪರ ಸೇವೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸುವಂತೆಯೂ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಸ್‌ಐಟಿ ಮುಖ್ಯಸ್ಥರ ಹುದ್ದೆಗೆ ತಾವು ಯಾವುದೇ ಅರ್ಜಿ ಸಲ್ಲಿಸಿರಲಿಲ್ಲ. ಹೈಕೋರ್ಟ್ ತನ್ನನ್ನು ನೇಮಿಸಿತ್ತು ಎಂದು ಸ್ಪಷ್ಟಪಡಿಸಿರುವ ಅಲೋಕ್ ಕುಮಾರ್, ಎಸ್‌ಐಟಿ ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವಾಗ ತಮ್ಮ ಕುರಿತು ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಸತ್ಯಾಂಶಗಳ ವಿವರಣೆ ನೀಡುವಂತೆ ಅಕ್ಟೋಬರ್ 5ರಂದೇ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾಗಿಯೂ ಅಲೋಕ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. ತಮ್ಮ ವಿರುದ್ಧ ಬಾಕಿ ಇಲ್ಲದ ವಿಚಾರಗಳನ್ನು ಮುಂದಿಟ್ಟು ವಾದಿಸಿರುವುದು ಸರಿಯಲ್ಲ ಎಂಬುದು ಅವರ ಆಕ್ಷೇಪವಾಗಿದೆ.

ಇನ್ನೊಂದೆಡೆ, ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯ ಕುರಿತು ಸುಪ್ರೀಂ ಕೋರ್ಟ್ ಕೆಲವು ಸೂಚನೆಗಳನ್ನು ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದರ ಪ್ರಕಾರ, ಸಿಐಡಿ ಅಧಿಕಾರಿಗಳು ಪ್ರತ್ಯೇಕವಾಗಿ ಆರೋಪಪಟ್ಟಿ ಸಲ್ಲಿಸುವ ಬದಲು ಹೊಸ ಎಸ್‌ಐಟಿ ಸಿಐಡಿ ನಡೆಸಿರುವ ತನಿಖೆಯ ಆಧಾರದಲ್ಲೇ ಮುಂದುವರಿಯಬೇಕು. ಸಂಪೂರ್ಣ ತನಿಖೆ ಮುಗಿದ ಬಳಿಕ ಎಸ್‌ಐಟಿ ಒಟ್ಟಿಗೆ ಆರೋಪಪಟ್ಟಿ ಸಲ್ಲಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಮತ್ತು ದಿವ್ಯಾ ಗೋಪಿನಾಥನ್ ಅವರನ್ನು ಎಸ್‌ಐಟಿಯಿಂದ ಹೊರಗಿಡುವಂತೆಯೂ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಸ ಎಸ್‌ಐಟಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆಯಿದೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ, ಎಸ್‌ಐಟಿ ರಚನೆ ಹಾಗೂ ಅಧಿಕಾರಿಗಳ ವಿರುದ್ಧದ ಆರೋಪಗಳ ವಿಚಾರಗಳು ಈಗ ಕಾನೂನು ಮತ್ತು ಆಡಳಿತಾತ್ಮಕ ವಲಯದಲ್ಲಿ ಮಹತ್ವ ಪಡೆದಿವೆ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಂತೆ ಮುಂದಿನ ತನಿಖೆ ಹೇಗೆ ಸಾಗಲಿದೆ ಮತ್ತು ಅಲೋಕ್ ಕುಮಾರ್ ಅವರ ಪತ್ರಕ್ಕೆ ರಾಜ್ಯ ಸರ್ಕಾರ ಯಾವ ಪ್ರತಿಕ್ರಿಯೆ ನೀಡಲಿದೆ ಎಂಬುದು ಗಮನಾರ್ಹವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button